ಸುದ್ಧಿಕನ್ನಡ ವಾರ್ತೆ
ಗೋವಾದಲ್ಲಿ ಕನ್ನಡಿಗ ಟ್ರಕ್ ಚಾಲಕನ ಮೇಲೆ ಹಲ್ಲೆ ನಡೆಸಿರುವುದು ಖೇದಕರ ಸಂಗತಿಯಾಗಿದೆ. ಗೋವಾದಲ್ಲಿ ಕನ್ನಡಿಗ ಟ್ರಕ್ ಮಾಲೀಕ ಸದಸ್ಯರಿಗೆ ಜೀವ ಬೆದಿರಿಕೆಯೊಡ್ಡುತ್ತಿದ್ದಾರೆ. ಗೋವಾದಲ್ಲಿ ಸದ್ಯ ಕನ್ನಡಿಗ ಟ್ರಕ್ ಮಾಲೀಕರ ಸಂಘದ ಸದಸ್ಯರು ಭಯದಿಂದಲೇ ಬದುಕುವಂತಾಗಿದೆ. ನಮಗೂ ಎಲ್ಲರಂತೆ ಜೀವಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಬಳಿ ಗೋವಾ ಮಾಪ್ಸಾ ಕನ್ನಡಿಗರ ಟ್ರಕ್ ಮಾಲೀಕರ ಸಂಘಟನೆ ಮನವಿ ಮಾಡಿದೆ.
ಗೋವಾದಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ್ ಹಾಗೂ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತೀಹಳ್ಳಿ ರವರ ಬಳಿ ಗೋವಾ ಮಾಪ್ಸಾ ಟ್ರಕ್ ಮಾಲೀಕರ ಸಂಘಟನೆ ತಮ್ಮ ಅಳಲನ್ನು ತೋಡಿಕೊಂಡಿದೆ.
ನಾವು ಕನ್ನಡಿಗರು ಸುಮಾರು 30 ವರ್ಷಗಳಿಂದ ಉದ್ಯೋಗ ಅರಸಿಕೊಂಡು ಗೋವಾಕ್ಕೆ ಬಂದು ಗೋವಾದ ವಿವಿಧ ಭಾಗಗಳಲ್ಲಿ ನೆಲೆ ನಿಂತಿದ್ದೇವೆ. ಗೋವಾದಲ್ಲಿ ಹೊಟ್ಟೆಪಾಡಿಗಾಗಿ ನಮಗೆ ಅನುಕೂಲ ಆಗುವ ಕೆಲಸಗಳಲ್ಲಿ ಕೂಲಿ ಕಾರ್ಮಿಕರಾಗಿ ಶೃಮವಹಿಸಿ ದುಡಿದು ನಮ್ಮ ಕಾಲಮೇಲೆ ನಿಂತುಕೊಂಡು ಜೀವನ ಸಾಗಿಸುತ್ತಿದ್ದೇವೆ. ಅದರಲ್ಲಿ ಹಲವು ಕನ್ನಡಿಗರು ಸ್ವಂತ ಉದ್ಯೋಗ ಪ್ರಾರಂಭ ಮಾಡಿ ಕಟ್ಟಡ ಕಾಮಗಾರಿಗೆ ಬೇಕಾಗುವ ಸಾಮಗ್ರಿ ಸರಬರಾಜು ಮಾಡಲು ಟಿಪ್ಪರ್ ಖರೀದಿ ಮಾಡಿ ಕಲ್ಲಿನ ಕಣಿಗಳಿಂದ ಕೆಂಪು ಕಲ್ಲು, ಮಹಾರಾಷ್ಟ್ರದಿಂದ ಮರಳು, ಕಡಿ, ಸರಬರಾಜು ಮಾಡುತ್ತ ಶೃಮವಹಿಸಿ ಜೀವನ ನಡೆಸುತ್ತಿದ್ದೇವೆ. ಕಳೆದ 6 ತಿಂಗಳಿನಿಂದ ಗೋವಾದ ಮಿಲಿಂದ ಶೇಟಯೆ ನೇತೃತ್ವದ ಪೆಡ್ನೆ ಬಾರ್ದೇಸ್ ಲಾರಿ ಮಾಲೀಕರ ಸ್ಥಳೀಯ ಸಂಘಟನೆಯ ಪುಂಡರ ಗುಂಪು ಮಾರ್ಗ ಮಧ್ಯದಲ್ಲಿ ಕನ್ನಡಿಗರ ಟಿಪ್ಪರ್ ಲಾರಿಗಳನ್ನು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕನ್ನಡಿಗ ಟ್ರಕ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಗೋವಾ ಕನ್ನಡಿಗ ಟ್ರಕ್ ಮಾಲೀಕ ಸಂಘ ಹೇಳಿದೆ.
ಕನ್ನಡಿಗ ಲಾರಿ ಚಾಲಕರಿಗೆ ಸ್ಥಳಿಯರ ಈ ಗುಂಪು ನಿತ್ಯ ಕಿರುಕುಳ ನೀಡುತ್ತಿದೆ. ಜುಲೈ 23 ರಂದು ಬೆಳಿಗ್ಗೆ 11 ಗಂಟೆಯ ಸುಮಾರು ಕನ್ನಡಿಗ ಟ್ರಕ್ ಚಾಲಕನ ಟ್ರಕ್ ಗೆ ಓಮಿನಿಯಲ್ಲಿ ಬಂದು ಮಾರ್ಗಮಧ್ಯದಲ್ಲಿ ಅಡ್ಡಗಟ್ಟಿ ನಿಲ್ಲಿಸಿ 8 ರಿಂದ 10 ಜನರ ಗುಂಪು ಕೊಂಕಣಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕನ್ನಡಿಗ ಟ್ರಕ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಿವಿ ಪರದೆ ಹರಿದುಹೋಗುವ ರೀತಿಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಕನ್ನಡಿಗ ಟ್ರಕ್ ಮಾಲೀಕರ ಸಂಘ ಹೇಳಿದೆ.
ಇದೇ ರೀತಿ ಕನ್ನಡಿಗರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಕುರಿತು ಸ್ಥಳೀಯ ಪೋಲಿಸರಿಗೆ ದೂರು ಸಲ್ಲಿಸಿದರೂ ಕೂಡ ಅವರು ಯಾವುದೇ ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ಕನ್ನಡಿಗರು ಕಂಗಾಲಾಗಿದ್ದೇವೆ. ನಮ್ಮ ಜೀವನ ಅತಂತ್ರವಾಗಿದೆ. ನಿತ್ಯ ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಕರ್ನಾಟಕ ಸರ್ಕಾರ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿಕೊಡಬೇಕೆಂದು ಗೋವಾ ಕನ್ನಡಿಗ ಮಾಪ್ಸಾ ಟ್ರಕ್ ಮಾಲೀಕರ ಸಂಘವು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಬಳಿ ಮನವಿ ಮಾಡಿದೆ.