ಸುದ್ಧಿಕನ್ನಡ ವಾರ್ತೆ
ಗೋವಾ ಗಡಿಭಾಗ ಲೋಲಯೆ-ಪೋಳೆಯಲ್ಲಿ ಬಂಗಲೆಯೊಂದರಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ಮೇಲೆ ಧಾಳಿ ನಡೆಸಿದ ನಂತರ ಇದೀಗ ಪೋಲಿಸರು ಈ ಪ್ರಕರಣದ ವಿಚಾರಣೆಗೆ ಹಾಜರಾಗಲು ಈ ಭಾಗದ ಮಧ್ಯ ವ್ಯಾಪಾರಸ್ಥ ಲಿಗೋರ್ ಡಿಸೋಜಾ ರವರ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದಾರೆ.
ಕಾಣಕೋಣ ಪೋಲಿಸ್ ನಿರೀಕ್ಷಕ ಹರೀಶ್ ರಾವುತ್ ದೇಸಾಯಿ ರವರು ನೀಡಿರುವ ಮಾಹಿತಿಯ ಅನುಸಾರ- ಈಗಾಗಲೇ ಲಿಗೋರ್ ಡಿಸೋಜಾ ರವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅವರಿಗೆ ವಿಚಾರಣೆಗೆ ಪೋಲಿಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಜುಲೈ 23 ರಂದು ಬೆಳ್ಳಂಬೆಳಿಗ್ಗೆ ಕಾಣಕೋಣ ಪೋಲಿಸರು ಈ ಜೂಜು ಅಡ್ಡೆಯ ಮೇಲೆ ಧಾಳಿ ನಡೆಸಿ ಜೂಜು ನಡೆಸುತ್ತಿರುವ 7 ಕರ್ಮಚಾರಿಗಳು ಸೇರಿದಂತೆ ಇತರ 40 ಜನರನ್ನು ಪೋಲಿಸರು ಬಂಧಿಸಿದ್ದರು.
ಬಂಧಿತರಲ್ಲಿ ಬಹುತೇಕ ಜನರು ಕಾರವಾರ ಮತ್ತು ಅಂಕೋಲಾ ಭಾಗದವರೇ ಆಗಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕ ಭಾಗದಿಂದ ಜನರು ಕಾಣಕೋಣಕ್ಕೆ ಬಂದು ಈ ಜೂಜು ಅಡ್ಡೆಯಲ್ಲಿ ಆಟವಾಡಿ ಹೋಗುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಪೋಲಿಸರಿಗೆ ಮಾಹಿತಿ ಲಭ್ಯವಾಗಿದೆ. ಬಂಧಿತರೆಲ್ಲರೂ ಈಗಾಗಲೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತನಾದ ರ್ಯಾನಿ ಫರ್ನಾಂಡಿಸ್ (29) ಈ ವ್ಯಕ್ತಿ ಪೋಳೆ ಸ್ಥಳೀಯ ನಿವಾಸಿಯಾಗಿದ್ದು ಇನ್ನುಳಿದವರೆಲ್ಲರೂ ಕರ್ನಾಟಕದವರೇ ಆಗಿದ್ದಾರೆ. ದುಲ್ಲಾಗಾಳಿ-ಲೋಲಯೆಯಲ್ಲಿ ತೆಲ್ಮಾ ಎಂಬ ಮಹಿಳೆಯ ಬಂಗಲೆಯಲ್ಲಿ ಈ ಜೂಜು ಅಡ್ಡೆಯಿತ್ತು. ಕಾರ್ಯಾಚರಣೆ ನಡೆಸಿ ಪೋಲಿಸರು ಅಂದು ಬಂಧಿತರಿಂದ 5.20 ಲಕ್ಷ ರೂ ಹಣ, 5 ಲಕ್ಷ ರೂ ಮೌಲ್ಯದ 40 ಮೊಬೈಲ್, 6 ಲಕ್ಷ ರೂ ಮೌಲ್ಯದ ಕರ್ನಾಟಕ ನೋಂದಣಿ ಹೊಂದಿದ ಎರ್ಟಿಗಾ ಕಾರು, 1 ಕಂಪ್ಯೂಟರ್ ಮೊನಿಟರ್ ಸೇರಿ 16.35 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಪೋಲಿಸರು ವಷಪಡಿಸಿಕೊಂಡಿದ್ದಾರೆ.
ಯಾವ ಬಂಗಲೆಯಲ್ಲಿ ಜೂಜು ಅಡ್ಡೆಯಿತ್ತೊ ಆ ಬಂಗಲೆಯು ಡಿಸೋಜಾ ರವರ ಸಹೋದರಿಯ ಮಾಲೀಕತ್ವದ ಬಂಗಲೆಯಾಗಿದ್ದು, ಡಿಸೋಜಾ ರವರೇ ಈ ಜೂಜು ಅಡ್ಡೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೋಜಾ ರವರಿಗೆ ವಿಚಾರಣೆಗಾಗಿ ಪೋಲಿಸರು ನೋಟಿಸ್ ಜಾರಿಗೊಳಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕದಿಂದ ಗೋವಾದ ಗಡಿ ಭಾಗಕ್ಕೆ ಬಂದು ಜೂಜಾಟ ಆಡುತ್ತಿದ್ದ ವೇಳೆ ಗೋವಾ ಪೋಲಿಸರು ಧಾಳಿ ನಡೆಸಿ ಕರ್ನಾಟಕದ ವಿವಿಧ ಭಾಗಗಳ 40 ಜನರನ್ನು ಬಂಧಿಸಿದ್ದರು. ಉತ್ತರಕನ್ನಡ ಜಿಲ್ಲೆಯ ಕುಮಟಾ, ಯಲ್ಲಾಪುರ,ಶಿವಮೊಗ್ಗ ಹಾಗೂ ಗೋವಾ ಮೂಲದವರೂ ಸೇರಿದಂತೆ ಒಟ್ಟೂ 40 ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದರು.