ಸುದ್ಧಿಕನ್ನಡ ವಾರ್ತೆ
ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಗೋವಾದ ಅಭಿವೃದ್ಧಿಯಲ್ಲಿ ಶೃಮಿಸುವ ಕನ್ನಡಿಗರಿಗೆ “ಘಾಟಿ ಲೋಕ್” ಎಂದು ಬೈಯ್ಯುವುದು ಗೋವಾದಲ್ಲಿ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ನಿನ್ನೆಯಷ್ಟೇ ಗೋವಾದಲ್ಲಿ ಕನ್ನಡಿಗ ಟ್ರಕ್ ಚಾಲಕನಿಗೂ ಕೂಡ ಇಂತಹದ್ದೇ ಶಬ್ದ ಹಾಗೂ ಅವಾಚ್ಯ ಶಬ್ದ ಬಳಸಿ ಹಲ್ಲೆ ನಡೆಸಿರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.ಗೋವಾದಲ್ಲಿ ಕನ್ನಡಿಗರು ಸೇಫ್ ಆಗಿದ್ದಾರಾ…? ಎಂಬ ಪ್ರಶ್ನೆ ಕೂಡ ಮತ್ತೆ ಮೂಡುತ್ತಿದೆ.

ಕನ್ನಡಿಗರು ಶೃಮಜೀವಿಗಳು ಎಂಬುದರಲ್ಲಿ ಎರಡು ಮಾತಿಲ್ಲ. ಅಂತೇಯೇ ಗೋವಾಕ್ಕೆ ಜೀವನ ಕಟ್ಟಿಕೊಳ್ಳಲು ಬಂದು ಇಲ್ಲಿ ಕನ್ನಡಿಗರು ಆರ್ಥಿಕವಾಗಿ ಸದೃಢವಾಗಿದ್ದಾರೆ ಎಂದರೆ ಅದು ಮನೆಯಲ್ಲಿಯೇ ಆರಾಮಾಗಿ ಕುಳಿತುಕೊಂಡು ಆಗಿರುವುದಲ್ಲ. ಬದಲಾಗಿ ಗೋವಾದಲ್ಲಿ ಕನ್ನಡಿಗರು ಹಗಲಿರಳೆನ್ನದೆಯೇ ಶೃಮಿಸಿ ಕಷ್ಟಪಟ್ಟು ಕನ್ನಡಿಗರು ಮೇಲಕ್ಕೆ ಬಂದಿದ್ದಾರೆ. ಗೋವಾಕ್ಕೆ ಒಂದು ಕಾಲದಲ್ಲಿ ಕೂಲಿ ಕಾರ್ಮಿಕರಾಗಿ ಬಂದು ಇಲ್ಲಿ ಕಷ್ಟುಪಟ್ಟು ದುಡಿದು ದೊಡ್ಡ ದೊಡ್ಡ ಉದ್ದಿಮೆ ನಡೆಸುತ್ತಿರುವಂತಹ ಅದೆಷ್ಟೋ ಕನ್ನಡಿಗರಿದ್ದಾರೆ. ಆದರೆ ಗೋವಾಕ್ಕೆ ಬಂದ ಕನ್ನಡಿಗರು ಇಲ್ಲಿ ಶ್ರೀಮಂತರಾದರು ಎಂದರೆ ಗೋವಾದ ಸ್ಥಳೀಯ ಜನರ ಉದ್ಯೋಗವನ್ನು ಕನ್ನಡಿಗರು ಕಸಿದುಕೊಂಡರು ಎಂಬುದು ತೀರಾ ತಪ್ಪು ಕಲ್ಪನೆ.ಆದರೆ ಇತ್ತೀಚಿನ ದಿನಗಳಲ್ಲಿ ಗೋವಾದಲ್ಲಿ ಕನ್ನಡಿಗರನ್ನು ಇದೇ ದೃಷ್ಠಿಯಲ್ಲಿ ಕಾಣುತ್ತಿರುವುದು ಬೇಸರದ ಸಂಗತಿ. ಗೋವಾದ ಸರ್ವತೋಮುಖ ಅಭಿವೃದ್ಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಕನ್ನಡಿಗರು ದುಡಿದಿದ್ದಾರೆ ಮತ್ತು ದುಡಿಯುತ್ತಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು.

ಘಾಟಿ ಎಂಬುದು ನಿಂದನೀಯ ಪದ…!
ಘಾಟಿ ಲೋಕ್ ಎಂಬ ಶಬ್ದ ನಿಂದನೀಯ ಪದ ಎಂದು ಘೋಷಣೆಯಾಗಬೇಕಿದೆ. ಗೋವಾದಲ್ಲಿ ಕನ್ನಡಿಗರಿಗೆ ಇನ್ನು ಮುಂದೆ ಯಾರೂ ಕೂಡ ಇಂತಹ ಶಬ್ದ ಬಳಸದಂತೆ ಕರ್ನಾಟಕ ಸರ್ಕಾರವು ಸೂಕ್ತ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಿದೆ. ಗೋವಾದಲ್ಲಿ ಯಾವುದೇ ಕನ್ನಡಿಗರಿಗೆ ಘಾಟಿ ಲೋಕ್ ಎಂದು ಹೀಯಾಳಿಸಿದಲ್ಲಿ ನಿಂದನೀಯ ಪದ ಎಂದು ಘೋಷಿಸಿ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ದೂರು ದಾಖಲಾಗುವಂತೆ ಅಗತ್ಯ ಕಾನೂನಿನ ತಿದ್ದುಪಡಿ ತರುವ ಅಗತ್ಯವಿದೆ.

ಗೋವಾದಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ಇಲ್ಲಿನ ನಿವಾಸಿಗಳಾಗಿದ್ದಾರೆ. ಇಷ್ಟೇ ಅಲ್ಲದೆಯೇ ಇಲ್ಲಿಗೆ ಕಾರ್ಮಿಕರಾಗಿ ಬಂದು ಹೋಗುವ ಕನ್ನಡಿಗರು ಕೂಡಾ ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಈ ಎಲ್ಲ ಕನ್ನಡಿಗರು ಇಂದು ಆತಂಕ ಪಡುವಂತಾಗಿದೆ. ಗಡಿನಾಡಲ್ಲಿರುವ ಕನ್ನಡಿಗರ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಅದೆಷ್ಟೊ ಖರ್ಚು ಮಾಡುತ್ತದೆ. ಅದರಂತೆಯೇ ಇಂತಹ ವಿಷಯಗಳನ್ನು ಕೂಡ ಗಂಭೀರವಾಗಿ ಪರಿಗಣಿಸಿ ಹೊರನಾಡ ಗೋವೆಯಲ್ಲಿರುವ ಕನ್ನಡಿಗರ ರಕ್ಷಣೆಗೆ ಮುಂದಾಗಬೇಕಿದೆ.
ನಾವೆಲ್ಲ ಭಾರತೀಯರು, ನಮಗೆ ಯಾವುದೇ ರಾಜ್ಯದಲ್ಲಿ ಹೋಗಿ ಉದರ ನಿರ್ವಹಣೆಗೆ ಉದ್ಯೋಗ ಮಾಡಿಕೊಂಡು ಬದುಕುವ ಹಕ್ಕು ಪ್ರತಿಯಬ್ಬ ಭಾರತೀಯನಿಗೂ ಇದೆ. ಹೀಗಿರುವಾಗ ಗೋವಾದಲ್ಲಿ ಕನ್ನಡಿಗರ ಮೇಲೆ ಏಕೆ ಪದೆ ಪದೆ ದೌರ್ಜನ್ಯ ನಡೆಯುತ್ತಿದೆ…? ಎಂಬ ಪ್ರಶ್ನೆ ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.