ಸುದ್ಧಿಕನ್ನಡ ವಾರ್ತೆ
ಪಣಜಿ: ಸುಂದರ ಪ್ರವಾಸಿ ತಾಣಗಳಿಂದಾಗಿ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿರುವ ಗೋವಾಕ್ಕೆ ಸದ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದು ಕಂಡುಬರುತ್ತಿದೆ. ಆದರೆ ಪ್ರವಾಸಿಗರ ಈ ಗರ್ದಿಯನ್ನು ಕೆಲವರು ದುರುಪಯೋಗ ಪಡೆದುಕೊಳ್ಳುತ್ತಿರುವುದನ್ನು ನಾವು ಕಾಣಬಹುದಾಗಿದೆ. ಇಂತಹದ್ದೇ ಘಟನೆಯೊಂದು ಗೋವಾ ರಾಜಧಾನಿ ಪಣಜಿ ಸಮೀಒಪದ ಪರ್ವರಿಯಲ್ಲಿ ಶನಿವಾರ ನಡೆದಿದೆ. ಗೋವಾದಲ್ಲಿ ಪೋಲಿಸರು ವಾಹನವನ್ನು ತಪಾಸಣೆ ನಡೆಸುತ್ತಾರೆ ಎಂಬ ಕಾರಣಕ್ಕೆ ತಮ್ಮ ವಾಹನಕ್ಕೆ ಮಹಾರಾಷ್ಟ್ರ ಪೋಲಿಸ್ ಎಂದು ಬರೆದುಕೊಂಡು ಗೋವಾದಲ್ಲಿ ಓಡಾಡುತ್ತಿದ್ದ ಪ್ರವಾಸಿಗರನ್ನು ಗೋವಾ ಪರ್ವರಿ ಪೋಲಿಸರು ಬಂಧಿಸಿದ್ದಾರೆ.
ಪರ್ವರಿ ಪೋಲಿಸರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಮಹಾರಾಷ್ಟ್ರ ನೋಂದಣಿ ಹೊಂದಿದ್ದ ಕಾರೊಂದು ಸಂಶಯಾಸ್ಪದ ರೀತಿಯಲ್ಲಿ ಓಡಾಟ ನಡೆಸುತ್ತಿರುವುದು ಪೋಲಿಸರಿಗೆ ಕಂಡುಬಂತು. ಕಾರಿನ ಮುಂಭಾಗದಲ್ಲಿ ಮಹಾರಾಷ್ಟ್ರ ಪೋಲಿಸ್ ಎಂದು ಬರೆದುಕೊಳ್ಳಲಾಗಿತ್ತು.
ಸಂಶಯ ಬಂದಿದ್ದರಿಂದ ಪರ್ವರಿ ಪೋಲಿಸರು ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದರು. ಆದರೆ ಕಾರಿನಲ್ಲಿದ ಯಾರೊಬ್ಬರೂ ಕೂಡ ಪೋಲಿಸ್ ಇಲಾಖೆ ಸಂಬಂಧಪಟ್ಟವರಾಗಿರಲಿಲ್ಲ. ಗೋವಾ ಪ್ರವಾಸಕ್ಕೆ ಬಂದಾಗ ಯಾವುದೇ ತಪಾಸಣೆ ನಡೆಯಬಾರದು ಮತ್ತು ವಿಶೇಷ ಸವಲತ್ತು ಲಭಿಸುವಂತಾಗಬೇಕು ಎಂಬ ಉದ್ದೇಶದಿಂದ ಈ ಪ್ರವಾಸಿಗರು ಕಾರಿನ ಮೇಲೆ ಪೋಲಿಸ್ ಎಂದು ಬರೆದುಕೊಂಡಿದ್ದರು ಎನ್ನಲಾಗಿದೆ.
ಗೋವಾ ಪೋಲಿಸರು ಕೂಡಲೇ ಈ ಪ್ರವಾಸಿಗರನ್ನು ಬಂಧಿಸಿದ್ದಾರೆ. ಈ ಪ್ರವಾಸಿಗರನ್ನು ಮಾಪ್ಸಾ ಉಪವಿಭಾಗೀಯ ದಂಡಾಧಿಕಾರಿಗಳ ಎದುರು ಹಾಜರು ಪಡಿಸಲಾಗಿದೆ. ನಂತರ ಪ್ರವಾಸಿಗರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಸಂಬಂಧಿತ ಕಾರನ್ನು ಜಫ್ತಿ ಮಾಡಲಾಗಿದೆ. ಈ ಪ್ರವಾಸಿಗರು ಭಾರಿ ಪ್ರಮಾಣದ ದಂಡ ವಿಧಿಸಬೇಕಾಗಲಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಗೋವಾಕ್ಕೆ ಬಂದು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪೋಲಿಸರ ಹೆಸರಿನಲ್ಲಿ ಈ ರೀತಿ ಜನರ ದಿಕ್ಕು ತಪ್ಪಿಸುವುದು ಗಂಭೀರ ಅಪರಾಧವಾಗಿದೆ. ಇಂತಹ ಅಪರಾಧವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
