ಸುದ್ಧಿಕನ್ನಡ ವಾರ್ತೆ
ಪಣಜಿ: ಹೊಸ ವರ್ಷ ಸ್ವಾಗತಕ್ಕಾಗಿ ಗೋವಾಕ್ಕೆ ಬರುವ ಲಕ್ಷಾಂತರ ಪ್ರವಾಸಿಗರಿಂದ ಉಂಟಾಗುವ ಗರ್ದಿಯನ್ನು ಗಮನದಲ್ಲಿಟ್ಟುಕೊಂಡು ಗೋವಾ ರಾಜ್ಯ ಪೋಲಿಸ್ ಇಲಾಖೆಯು ಅಧಿಕ ಭಧ್ರತೆ ಕಲ್ಪಿಸಿದೆ. ಉತ್ತರ ಗೋವಾದಲ್ಲಿ 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ನಾಕಾಬಂದಿ ಹಾಕಲಾಗಿದ್ದು ಎಲ್ಲಡೆ ತಪಾಸಣೆ ನಡೆಸಲಾಗುತ್ತಿದೆ.
ನಾಕಾಬಂದಿಗಳಲ್ಲಿ ತಪಾಸಣೆಗಾಗಿ 700 ಐಆರ್ ಬಿ ಪೋಲಿಸರನ್ನು ನಿಯೋಜಿಸಲಾಗಿದೆ ಎಂದು ಪೋಲಿಸ್ ಮಹಾಸಂಚಾಲಕ ಅಲೋಕಕುಮಾರ್ ಮಾಹಿತಿ ನೀಡಿದ್ದಾರೆ.
ಬೀಚ್ ಭಾಗದಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಟೂರಿಸ್ಟ ಹಾಗೂ ಕೋಸ್ಟಲ್ ಪೋಲಿಸರನ್ನು ನಿಯೋಜಿಸಲಾಗಿದೆ. ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದರೆ ಎಟಿಎಸ್ ಹಾಗೂ ಬಾಂಬ್ ಶೋಧಕ ತಂಡವನ್ನು ತಪಾಸಣೆಗೆ ನಿಯೋಜಿಸಲಾಗಿದೆ. ಗರ್ದಿಯ ಸ್ಥಳಗಳಲ್ಲಿ ತಪಾಸಣೆ ನಡೆಸಲು ಶ್ವಾನ ದಳವನ್ನು ಕೂಡ ನಿಯೋಜಿಸಲಾಗಿದೆ. ರಾತ್ರಿ ಪೋಲಿಸರು ಗಸ್ತು ನಡೆಸಲಿದ್ದಾರೆ.
ಹೊಸ ವರ್ಷ ಸಂಭ್ರಮಾಚರಣೆಯ ಸಂದರ್ಭದಲ್ಲಿ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಲು ಅಧಿಕ ಪೋಲಿಸರನ್ನು ನಿಯೋಜಿಸಲಾಗಿದೆ.
