ಸುದ್ಧಿಕನ್ನಡ ವಾರ್ತೆ
ಪಣಜಿ: ನವದೆಹಲಿಯ ಕೆಂಪು ಕೋಟೆಯ ಬಳಿ ನಡೆದ ಕಾರ್ ಬಾಂಬ್ ಸ್ಪೋಟ (Bomb Blast)ಘಟನೆಯ ನಂತರ ಕೇಂದ್ರ ಗೃಹ ಮಂತ್ರಾಲಯ ತನಿಖಾ ಕಾರ್ಯ ಚುರುಕುಗೊಳಿಸಿದೆ. ಈ ಹಿನ್ನೆಲೆಯಲ್ಲಿ ಗೋವಾ ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದೆ. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಹೆಚ್ಚಿನ ತಪಾಸಣೆ ಹಾಗೂ ಕಟ್ಟೆಚ್ಚರ ವಹಿಸುವಂತೆ ಪೋಲಿಸ್ ಇಲಾಖೆಗೆ ಸೂಚನೆ ನೀಡಿದ್ದಾರೆ.

ದೆಹಲಿಯಲ್ಲಿ ನಡೆದ ಬಾಂಬ್ ಸ್ಪೋಟ (Bomb Blast)  ಘಟನೆಯ ನಂತರ ಉತ್ತರ ಗೋವಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಸುರಕ್ಷತಾ ದೃಷ್ಠಿಯಿಂದ ಹೆಚ್ಚಿನ ಪೋಲಿಸರನ್ನು ನಿಯೋಜಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಹತ್ವದ ಸ್ಥಳಗಳಲ್ಲಿ ಭಧ್ರತೆ ಹೆಚ್ಚಿಸಲಾಗಿದೆ, ಹಾಗೂ ಪೋಲಿಸ್ ಗಸ್ತು ಕೂಡ ಹೆಚ್ಚಿಸಲಾಗಿದೆ ಎಂದು ಹಿರಿಯ ಪೋಲಿಸ್ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

ಗೋವಾ ರಾಜ್ಯದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಪ್ರದೇಶದಲ್ಲಿ ಅಧಿಕ ತಪಾಸಣೆ ನಡೆಸಲಾಗುತ್ತಿದೆ. ಸಂಶಯಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಕೂಡಲೆ ತಪಾಸಣೆ ನಡೆಸಲಾಗುತ್ತಿದೆ. ದೆಹಲಿಯ ಘಟನೆಯ ಕುರಿತಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಪ್ರತಿಕ್ರಿಯೆ ನೀಡಿ- ದೆಹಲಿ ಸ್ಪೋಟ ಘಟನೆಯಿಂದಾದ ಜೀವಹಾನಿಯಿಂದಾಗಿ ನನಗೆ ದುಃಖವುಂಟಾಗಿದೆ. ಮೃತ ವ್ಯಕ್ತಿಗಳ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.