ಸುದ್ಧಿಕನ್ನಡ ವಾರ್ತೆ
ಪಣಜಿ: ನವೆಂಬರ್ 20 ರಂದು ಗೋವಾದಲ್ಲಿ 56 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಇದೇ ಮೊದಲ ಬಾರಿಗೆ ಪಣಜಿಯ ಹಳೇಯ ಜಿಎಂಸಿ ಕಟ್ಟಡದ ಎದುರು ಆಯೋಜಿಸಲಾಗುತ್ತಿದೆ. ಈ ಮಹೋತ್ಸವದ ಓಪನ್ ಏರ್ ಉಧ್ಘಾಟನಾ ಸಮಾರಂಭದಲ್ಲಿ 23 ಚಿತ್ರಪಟ ಥೀಮ್ ಇರುವ ಪ್ಲೋಟ್ ಗಳು ಒಳಗೊಂಡಿರುತ್ತದೆ. ಈ ಪೈಕಿ 5 ಪ್ಲೋಟ್ ಗಳಿಗೆ ಬಹುಮಾನ ನೀಡಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.

ಪಣಜಿಯ ಸಚಿವಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಪ್ರಸಕ್ತ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 81 ದೇಶಗಳ 240 ಕ್ಕೂ ಹೆಚ್ಚು ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಇವುಗಳಲ್ಲಿ 13 ವರ್ಡ ಪ್ರೀಮಿಯರ್, 4 ಅಂತರಾಷ್ಟ್ರೀಯ ಪ್ರೀಮಿಯರ್, 46 ಏಷ್ಯಾ ಪ್ರೀಮಿಯರ್ ಚಲನಚಿತ್ರಗಳು ಕೂಡ ಒಳಗೊಂಡಿದೆ. ಪ್ರಸಕ್ತ ವರ್ಷ 50 ಕ್ಕೂ ಮಹಿಳಾ ನಿರ್ದೇಶಕರ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.

ಚಲನಚಿತ್ರ ನಿರ್ದೇಶಕ ಗುರುದತ್ತ, ರಾಜ್ ಕೋಸಲಾ, ಋತ್ವಿಕ್ ಘಟಕ್, ಪಿ ಭಾನುಮತಿ, ಭೂಪೇನ್ ಹಜಾರಿಕಾ, ಸಲೀಲ್ ಚೌಧರಿ ರವರನ್ನು ಚಲನಚಿತ್ರ ಮಹೋತ್ಸವದಲ್ಲಿ ವಿಶೇಷವಾಗಿ ಸನ್ಮಾನಿಸಲಾಗುತ್ತದೆ. ಸೂಪರ್ ಸ್ಟಾರ್ ರಜನೀಕಾಂತ್ ರವರು ತಮ್ಮ ಚಲನಚಿತ್ರ ಕ್ಷೇತ್ರದಲ್ಲಿ 50 ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಸಮಾರೋಪ ಸಮಾರಂಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.