ಸುದ್ಧಿಕನ್ನಡ ವಾರ್ತೆ
ಪಣಜಿ: ಕಡಿಮೆ ಸಂಬಳ ಹಾಗೂ ಕೆಲಸದಲ್ಲಿ ಕಿರುಕುಳದಿಂದ ಬೇಸರಗೊಂಡ ಉತ್ತರಕನ್ನಡದ ವ್ಯಕ್ತಿಯೋರ್ವ ಮಾನಸಿಕ ಖಿನ್ನತೆಯಿಂದ ಗೋವಾದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಗೋವಾದ ಮಡಗಾಂವ ರುಮಡಾಮಲ್ ನಲ್ಲಿ ವಾಸಿಸುತ್ತಿದ್ದ 35 ವರ್ಷದ ದಾಮೋದರ ಕಾಮತ್ ( ಕರ್ನಾಟಕದ ಉತ್ತರಕನ್ನಡ ಜಿಲ್ಲೆ) ಎಂಬ ವ್ಯಕ್ತಿ ತಾನು ವಾಸಿಸುತ್ತಿದ್ದ ರೂಮಿನಲ್ಲಿ ಟವೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ರುಮಡಾಮೊಲ್ ಶ್ರೀದತ್ತ ಮಂದಿರದ ಬಳಿ ವಾಸಿಸುತ್ತಿದ್ದ. ಈತ ಕಡಿಮೆ ಸಂಬಳ ಹಾಗೂ ಕೆಲಸದಲ್ಲಿ ಕಿರಿ ಕಿರಿಯಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಪೋಲಿಸರು ತನಿಖೆಯ ನಂತರ ಮಾಹಿತಿ ನೀಡಿದ್ದಾರೆ.

ಪೋಲಿಸರು ಘಟನಾ ಸ್ಥಳದಲ್ಲಿ ಪಂಚನಾಮೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದಕ್ಷಿಣ ಗೋವಾ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ. ಇದು ಅಸ್ವಾಭಾವಿಕ ಸಾವು ಎಂದು ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಲಿಸ್ ಸಬ್ ಇನ್ಸಪೆಕ್ಟರ್ ಪ್ರಫುಲ್ ಗಿರಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.