ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ಪಣಜಿಯ ಮುಕ್ತಿಧಾಮದಲ್ಲಿ ಕೆಲಸ ನಿರ್ವಹಿಸುತ್ತಿರುವ ಕನ್ನಡಿಗರನ್ನು ಗೋವಾ ಕನ್ನಡ ಸಮಾಜ ಇಂದು ಸ್ಮಾನಿಸಿರುವುದು ಬಹು ದೊಡ್ಡ ಕೆಲಸ. ತೊಟ್ಟಿಲು ಶಾಸ್ತ್ರಕ್ಕೆ ಎಲ್ಲರೂ ಬರ್ತಾರೆ, ಆದರೆ ಚಟ್ಟದ ಶಾಸ್ತಕ್ಕೆ ಬರುವವರು ಬಹಳ ಕಡಿಮೆ. ಕೊನೇಯ ವರೆಗೂ ಇರುವವರು ಮುಕ್ತಿಧಾಮದ ಕಾಯಕ ಯೋಗಿಗಳು ಮಾತ್ರ. ಇವರು ಒಂದಲ್ಲ ಒಂದು ಜನ್ಮದಲ್ಲಿ ನಮ್ಮ ಸಂಬಂಧಿಗಳೇ ಆಗಿರುತ್ತಾರೆ. ನೀವು ಮಾಡಿದ ಈ ಕನ್ನಡ ಸೇವೆ ಇಂದು ಶಿವನ ಪಾದ ಸೇರಿತು ಎಂದು ಖ್ಯಾತ ಹಾಸ್ಯ ಕಲಾವಿದರಾದ ಮನು ಹಂದಾಡಿ ನುಡಿದರು.

ಗೋವಾ ಕನ್ನಡ ಸಮಾಜ ಪಣಜಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಬೆಳಿಗ್ಗೆ ಪಣಜಿಯ ಕಾಂಪಾಲ ಬಾಲಭವನದಲ್ಲಿ ಆಯೋಜಿಸಿದ್ದ ಕರುನಾಡ ಸ್ವರಸಿರಿ ವೈಭವ-2025 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ಗೋವಾದಲ್ಲಿ ನೆಲೆಸಿರುವ ಕನ್ನಡಿಗರೆಲ್ಲರೂ ನೀವು ಎಲ್ಲಿಯವರು ಎಂದು ಕೇಳಿದರೆ ನಾವು ಕನ್ನಡಿಗರು ಎಂಬ ಒಂದೇ ಉತ್ತರ ಬರಬೇಕು. ನಾವು ಉತ್ತರ ಕರ್ನಾಟಕದವರು, ನಾವು ದಕ್ಷಿಣ ಕನ್ನಡದವರು, ನಾವು ಉತ್ತರಕನ್ನಡದವರು ಎಂಬ ವ್ಯತ್ಯಾಸ ಬರಬಾರದು. ಅತೆಯೇ ನಾವು ವಿದೇಶಕ್ಕೆ ಹೋದಾಗ ನಮ್ಮನ್ನು ಕೇಳಿದರೆ ನಾವು ಭಾರತೀಯರು ಎಂದು ಹೇಳುತ್ತೇವೆ. ಹಾಗೆಯೇ ಭಾರತದಲ್ಲಿ ನಾವು ಯಾವುದೇ ರಾಜ್ಯಕ್ಕೆ ಹೋದಾಗ ಎಲ್ಲಿಯವರು ಎಂದು ಕೇಳಿದರೆ ನಾವು ಕರ್ನಾಟಕದವರು ಕನ್ನಡಿಗರು ಎಂದೇ ಹೇಳುತ್ತೇವೆ. ಗ್ರಾಮೀಣ ಭಾಗದಲ್ಲಿ ನಮ್ಮ ಮೂಲ ಅಡಗಿದೆ. ಗ್ರಾಮೀಣ ಬದುಕನ್ನು ಯಾವತ್ತೂ ಮರೆಯಬಾರದು. ನೀವೆಲ್ಲ ಕನ್ನಡಿಗರ ಜನ್ಮಭೂಮಿ ಕರ್ನಾಟಕ ಅಂತೆಯೇ ಕರ್ಂಭೂಮಿ ಗೋವಾ. ಗೋವಾದಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಇಲ್ಲಿ ಅವಕಾಶ ಕೊಟ್ಟಿದ್ದಾರೆ ಅದನ್ನು ನಾವು ಎಂದಿಗೂ ಮರೆಯಬಾರದು. ಇಲ್ಲಿನ ಸ್ಥಳೀಯ ಭಾಷೆಯನ್ನೂ ಗೌರವಿಸಬೇಕು ಎಂದು ಮನಿ ಹಂದಾಡಿ ನುಡಿದರು.

ಕಾರ್ಯಕ್ರಮದ ಆರಂಭದಲ್ಲಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿ- ಗೋವಾ ಕನ್ನಡ ಸಮಾಜವು ಕಳೆದ ಸುಮಾರು 40 ವರ್ಷಗಳಿಂದ ಕನ್ನಡ ಭಾಷೆ, ಸಂಸ್ಕøತಿ ಪರಂಪರೆಯನ್ನು ಉಳಿಸಿ ಬೆಳೆಸುತ್ತಾ ಬಂದಿದೆ. ಪ್ರಸಕ್ತ ವರ್ಷ ಗೋವಾ ಕನ್ನಡ ಸಮಾಜ 40 ವರ್ಷ ಪೂರೈಸಿದೆ. ಇದುವರೆಗೂ ಹಲವು ಜನ ಅಧ್ಯಕ್ಷರು ಪದಾಧಿಕಾರಿಗಳು ಸಂಘವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ. ಪ್ರಸಕ್ತ ವರ್ಷ ನಮ್ಮ ಸಮಾಜದ ಮಾಣಿಕ್ಯ ಮಹೋತ್ಸವದ ಹಿನ್ನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ, ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ವಾಸ್ಕೊ ಬೈನಾ ಶ್ರೀ ಯಲ್ಲಾಲಿಂಗೇಶ್ವರ ಶಾರದಾ ಮಂದಿರ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪಿ.ವ್ಹಿ.ಪಾಟೀಲ್ ಸಮಾರಂಭದ ಉಧ್ಘಾಟನೆ ನೆರವೇರಿಸಿ ಮಾತನಾಡಿದರು. ಪಣಜಿಯ ಕೆಫೆ ಬೆಂಗಳೂರು ಹೋಟೆಲ್ ಮಾಲೀಕರಾದ ಸಂತೋಷ ಮುಖ್ಯ ಅತಿಥಿಗಳಾಗಿ ಹಾಗೂ ಒಮಿಡಾ ಡಾನ್ಸ ಮತ್ತು ಫಿಟ್ನೆಸ್ ಸಂಸ್ಥಾಪಕರಾದ ಅಂಜು ದೇಸಾಯಿ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.

ಪ್ರಾರಂಭದಲ್ಲಿ ವಾಣಿಶ್ರೀ ಮತ್ತು ತಂಡದವರು ನಾಡಗೀತೆ ಹಾಡಿದರು. ಸಚಿನ್ ಶಿರೋಳ್ ಮತ್ತು ತಂಡದವರು ನಿತ್ಯೋತ್ಸವ ಗೀತೆ ಹಾಡಿದರು. ಕಳೆದ ಹಲವು ವರ್ಷಗಳಿಂದ ಪಣಜಿಯ ಮುಕ್ತಿಧಾಮದಲ್ಲಿ ಕೆಲಸ ನಿರ್ವಹಿಸುತ್ತಿರುವ ಕನ್ನಡಿಗರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಕನ್ನಡ ಸಮಾಜದ ಮಾಣಿಕ್ಯ ಮಹೋತ್ಸವದ ಅಂಗವಾಗಿ ಮಕ್ಕಳಿಗೆ ಚಿತ್ರಕಲಾ ಸ್ಫರ್ಧೆ ಆಯೋಜಿಸಲಾಗಿತ್ತು. ಗೋವಾ ಕನ್ನಡ ಸಮಾಜದ ಕಾರ್ಯಕಾರಿ ಸಮೀತಿಯ ಸದಸ್ಯರಾದ ಚಿನ್ಮಯ ಎಂ.ಸಿ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಪುಷ್ಕಳ ಜಿ.ಭಟ್ ಹಾಗೂ ಚಿನ್ಮಯ್ ಜಿ. ಭಟ್ ರವರಿಂದ ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಹಾಡಿನ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ ಲೋಣಿ ವಂದನಾರ್ಪಣೆಗೈದರು. ಗೋವಾದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಆಗಮಿಸಿದ್ದರು. ಇಷ್ಟೇ ಅಲ್ಲದೆಯೇ ಗೋವಾ ಕನ್ನಡ ಸಮಾಜದ ಮಾಜಿ ಅಧ್ಯಕ್ಷರುಗಳು ಹಾಗೂ ವಿವಿಧ ಕನ್ನಡ ಸಂಘಟನೆಗಳ ಪದಾಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ಮನು ಹಂದಾಡಿ ರವರು ಸುಮಾರು ಒಂದು ತಾಸು ತಮ್ಮ ನಗೆಯ ಚಟಾಕಿಯ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಸಹಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
