ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಕಳೆದ ಕೆಲ ದಿನಗಳಿಂದ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಅಂತೆಯೇ ಮಾದಕ ಪದಾರ್ಥಗಳ ಅವ್ಯವಹಾರ ಕೂಡ ಹೆಚ್ಚುತ್ತಲೇ ಸಾಗಿದೆ ಎಂಬುದು ಆತಂಕದ ವಿಷಯವಾಗಿದೆ. ಗೋವಾ ಪೊಲೀಸ್ ಮಾದಕ ದ್ರವ್ಯ ನಿಗ್ರಹ ದಳ (ANC) ಶಿವೋಲಿಯಲ್ಲಿ ನಡೆಸಿದ ದಾಳಿಯಲ್ಲಿ ನೈಜೀರಿಯಾದ ಯುವಕ ಇನ್ನೋಸೆಂಟ್ ಎನ್ಜೆಡಿಗ್ವೆ (23) ಎಂಬಾತನನ್ನು ಬಂಧಿಸಿದೆ. ಆತನಿಂದ 4.6 ಲಕ್ಷ ಮೌಲ್ಯದ 40 ಗ್ರಾಂ ಕೊಕೇನ್ ಮತ್ತು 6 ಗ್ರಾಂ ಎಕ್ಟಾಸಿ ಪೌಡರ್ ವಶಪಡಿಸಿಕೊಳ್ಳಲಾಗಿದೆ.

ಮಾದಕ ದ್ರವ್ಯ ನಿಗ್ರಹ ದಳ ಮಾಧ್ಯಮಕ್ಕೆ ನೀಡಿದ ಮಾಹಿತಿಯ ಪ್ರಕಾರ, ಗೋವಾದ ಶಿವೋಲಿ ಪುಳಂಜಿಕ್ ಪ್ರದೇಶಕ್ಕೆ ವಿದೇಶಿ ಯುವಕ ಮಾದಕ ದ್ರವ್ಯ ಕಳ್ಳಸಾಗಣೆಗಾಗಿ ಬರುತ್ತಿರುವ ಬಗ್ಗೆ ಎ ಎನ್ ಸಿ ಅಧಿಕಾರಿಗೆ ಮಾಹಿತಿ ಲಭಿಸಿದೆ. ಅದರಂತೆ, ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಮತ್ತು ಉಪಾಧೀಕ್ಷಕ ಅಕ್ಷತ್ ಕೌಶಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ಸಜಿಂತ್ ಪಿಳ್ಳೆ ನೇತೃತ್ವದಲ್ಲಿ ಸಬ್ ಇನ್‍ಸ್ಪೆಕ್ಟರ್ ಪ್ರಿಯಾಂಕಾ ಗಾರುಡಿ, ಕಾನ್‍ಸ್ಟೆಬಲ್ ಸದಾನಂದ ಮಲಿಕ್, ಅಕ್ಷಯ್ ನಾಯ್ಕ್, ಅಮಿತ್ ಸಾಳುಂಕೆ, ವಿಶಾಲ್ ಶಿತೋಲೆ, ಯೋಗೇಶ್ ಮಡಗಾಂವ್ಕರ್, ಕುಡಾನ್ ಪಾಟೇಕರ್ ಮತ್ತು ಇತರ ಅಧಿಕಾರಿಗಳ ತಂಡ ಅಕ್ಟೋಬರ್ 2ರಂದು ಬೆಳಿಗ್ಗೆ ಶಿವೋಲಿ ಸೇತುವೆ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ನೈಜೀರಿಯನ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ನೈಜೀರಿಯಾದ ಯುವಕ ಇನ್ನೋಸೆಂಟ್ ಎನ್ಜೆಡಿಗ್ವೆ (23) ಎಂಬಾತನನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಆತನಿಂದ 4.6 ಲಕ್ಷ ಮೌಲ್ಯದ 40 ಗ್ರಾಂ ಕೊಕೇನ್ ಹಾಗೂ 6 ಗ್ರಾಂ ಎಕ್ಟಾಸಿ ಪೌಡರ್ ವಶಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಸಬ್ ಇನ್ಸ್‍ಪೆಕ್ಟರ್ ಪ್ರಿಯಾಂಕಾ ಗಾರುಡಿ ಅವರು ಆರೋಪಿ ಎನ್‍ಜೆಡಿಗ್ವೆ ವಿರುದ್ಧ ಮಾದಕ ದ್ರವ್ಯ ನಿಗ್ರಹ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

ANC  ತಂಡವು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆತ ಒಂದು ವರ್ಷದ ಹಿಂದೆ ವಿದ್ಯಾರ್ಥಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಎಂದು ಅವರು ತಿಳಿದುಬಂದಿದೆ. ಈತ ರಾಜಸ್ಥಾನದ ಅಜ್ಮೀರ್ ವಿಶ್ವವಿದ್ಯಾಲಯದಲ್ಲಿ ಬಿಬಿಎ ಓದುತ್ತಿದ್ದ ಎಂದು ಮಾಹಿತಿ ಲಭಿಸಿದೆ. ಗೋವಾ ಪೊಲೀಸ್‍ನ ಮಾದಕ ದ್ರವ್ಯ ನಿಗ್ರಹ ದಳ (ANC) ಈ ವರ್ಷ ನಡೆಸಿದ ದಾಳಿಯಲ್ಲಿ ಇದುವರೆಗೆ 5.30 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದೆ.