ಪಣಜಿ: ಗೋವಾ ರಾಜ್ಯ ಸರ್ಕಾರವು ಗೋವಾ ರಾಜ್ಯದ ಜನರ ಉದ್ಯೋಗವನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಸಾರಿಗೆ ವ್ಯವಸಾಯ ಇಂದು ಗೋವಾ ರಾಜ್ಯದ ಕೈಯ್ಯಲ್ಲಿದೆ, ಆದರೆ ರಾಜ್ಯ ಸರ್ಕಾರವು 500 ಹೊಸ ಬಸ್ ಖರೀದಿಸಿ ಈ ಬಸ್‍ನ್ನು ಓಡಿಸಲು ಬೇರೆಯವರ ಕೈಗೆ ಕೊಟ್ಟು ಗೋಮಂತಕೀಯರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭವನ್ನು ಸೃಷ್ಠಿಸುತ್ತಿದೆ. ಕೋವಿಡ್ ನಂತರ ಸರ್ಕಾರವು ಖಾಸಗಿ ಬಸ್‍ಗಾಗಿ ಅನುದಾನವನ್ನು ನೀಡಿಲ್ಲ. ಬಾಕಿ ಇರುವ ಅನುದಾನವನ್ನು ಸರ್ಕಾರವು ಗಣೇಶ ಚತುರ್ಥಿಯ ಮೊದಲು ನೀಡದಿದ್ದರೆ ಸಾರಿಗೆ ಬಸ್‍ನ ಎಲ್ಲ ಉದ್ಯೋಗಸ್ಥರನ್ನು ಒಗ್ಗೂಡಿಸಿ ಹೋರಾಟ ನಡೆಸಲಾಗುವುದು ಎಂದು ಗೋವಾ ರಾಜ್ಯ ಖಾಸಗಿ ಬಸ್ ಮಾಲೀಕ ಸಂಘಟನೆಯ ಅಧ್ಯಕ್ಷ ಸುದೇಶ ಕಲಂಗುಟ್‍ಕರ್ ಹೇಳಿದ್ದಾರೆ.

ಪಣಜಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು-ಮಾಜಿ ಮುಖ್ಯಮಂತ್ರಿ ದಿ.ಮನೋಹರ್ ಪರೀಕರ್ ರವರ ನೇತೃತ್ವದ ಸರ್ಕಾರವಿದ್ದಾಗ ನಮಗೆ ಸಮಯಕ್ಕೆ ಸರಿಯಾಗಿ ಸಬ್ಸಿಡಿ ಹಣವನ್ನು ನೀಡಲಾಗುತ್ತಿತ್ತು. ಆದರೆ ಪ್ರಮೋದ ಸಾವಂತ್ ಮುಖ್ಯಮಂತ್ರಿಯಾದ ನಂತರ ನಮಗೆ ಸಬ್ಸಿಡಿ ಹಣ ಸರಿಯಾಗಿ ನೀಡದೆಯೇ ತೊಂದರೆ ಮಾಡಿದ್ದಾರೆ. ಸಾರಿಗೆ ವ್ಯವಸಾಯ ಮಾಡುವ ಟ್ಯಾಕ್ಸಿ ಚಾಲಕರು, ಟ್ರಕ್,ರಿಕ್ಷಾ, ರೆಂಟ್ ಕ್ಯಾಬ್, ಈ ಎಲ್ಲ ವ್ಯವಹಾರಸ್ಥರಿಗೂ ಸರ್ಕಾರ ತೊಂದರೆ ನೀಡಿದೆ. ಇದರಿಂದಾಗಿ ನಾವೆಲ್ಲರೂ ಒಗ್ಗೂಡಿ ಆಂದೋಲನ ನಡೆಸಲಿದ್ದೇವೆ ಎಂದು ಸುದೇಶ ಕಲಂಗುಟ್‍ಕರ್ ನುಡಿದರು.

ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಮಾತನ್ನು ಸಾರಿಗೆ ಸಚಿವ ಮಾವಿನ್ ಗುದಿನ್ಹೊ ಕೇಳುವುದಿಲ್ಲ, ನಮಗೆ ಹೇಗೆ ಬೇಕೊ ಹಾಗೆ ಮಾಡುತ್ತಾರೆ. ಗೋಮಂತಕೀಯರ ಯಾವುದೇ ವಿಷಯಕ್ಕೆ ಸರ್ಕಾರ ತಲೆ ಕೆಡಿಸಿಕೊಳ್ಳದ ಕಾರಣ ಇಂದು ನಾವು ಪ್ರತಿಭಟನೆಗೆ ಇಳಿಯುವ ಸ್ಥಿತಿ ಬಂದಿದೆ. ಇತರ ಮಂತ್ರಿಗಳ ಬಗ್ಗೆ ಮಾಹಿತಿ ಇಲ್ಲ. ಆದರೆ ಸಚಿವ ಮಾವಿನ್ ಗುದಿನ್ಹೊ ರವರು ಮುಖ್ಯಮಂತ್ರಿಗಳ ಮಾತು ಕೇಳುವುದಿಲ್ಲ ಎಂಬುದನ್ನು ಮಾತ್ರ ನಾವು ಖಾತ್ರಿಯಾಗಿ ಹೇಳುತ್ತೇವೆ ಎಂದು ಸುದೇಶ ಕಲಂಗುಟ್‍ಕರ್ ನುಡಿದರು. ನಮಗೆ ರಾಷ್ಟ್ರೀಯ ಪಕ್ಷಗಳು ಬೆಂಬಲ ನೀಡುವುದಿಲ್ಲ ಎಂಬ ಖಾತ್ರಿಯಿದೆ. ನಮಗೆ ಸ್ಥಳೀಯ ಪಕ್ಷಗಳು ಸಹಕಾರ ನೀಡಲಿದೆ ಎಂಬ ವಿಶ್ವಾಸ ನಮಗಿದೆ ಎಂದು ಸುದೇಶ ಕಲಂಗುಟ್‍ಕರ್ ನುಡಿದರು.