ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ ವಾರದಿಂದ ನಾಪತ್ತೆಯಾಗಿದ್ದ ಗೋವಾದ ಬಿಚೋಲಿಯ ಮಯೆ ಊರಿನ 70 ವರ್ಷದ ವೃದ್ಧ ಮಹಿಳೆ ಬೆಳಗಾವಿಯಲ್ಲಿ ಪತ್ತೆಯಾಗಿದ್ದಾಳೆ. ಸದ್ಯ ಈ ಮಹಿಳೆಯನ್ನು ಬೆಳಗಾವಿಯಿಂದ ಗೋವಾಕ್ಕೆ ಕರೆತರಲಾಗಿದ್ದು, ಈ ಮಹಿಳೆ ಆರೋಗ್ಯವಾಗಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.

ನಾಪತ್ತೆಯಾಗಿದ್ದ ಮಹಿಳೆಯ ಶೋಧಕ್ಕೆ ಬೆಳಗಾವಿ ಪೋಲಿಸರು ಹಾಗೂ ಬೆಳಗಾವಿ ಸ್ಥಳೀಯರು ಕೂಡ ಸಹಕಾರ ನೀಡಿದ್ದಾರೆ ಎಂದು ಈ ಮಹಿಳೆಯ ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಚಂದ್ರಿಕಾ (ಮಂಗಲಾ) ಪೊಂಡು ಶಿರೋಡಕರ್ ಎಂಬ ಮಹಿಳೆಯು ಕಳೆದ ಬುಧವಾರ ಸಪ್ಟೆಂಬರ್ 10 ರಂದು ಗೋವಾದ ಬಿಚೋಲಿಯ ವಾರದ ಸಂತೆಗೆ ಮನೆಯಿಂದ ಹೊರಗೆ ಬಂದವಳು ಮನೆಗೆ ವಾಪಸ್ಸಾಗಿರಲಿಲ್ಲ.

ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಈಕೆಯ ಶೋಧ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಈಕೆಯ ಸಂಬಂಧಿಕರು ಗೋವಾದ ಮಯೆ, ಬಿಚೋಲಿ, ಸಾಖಳಿ, ದೋಡಾಮಾರ್ಗ ಭಾಗದಲ್ಲಿ ಶೋಧ ಕಾರ್ಯ ಕೈಗೊಂಡಿದ್ದರು. ಆದರೆ ಈಕೆ ಪತ್ತೆಯಾಗಿರಲಿಲ್ಲ.

ಆದರೆ ಈಕೆಯ ಸಂಬಂಧಿಕರು ಗೋವಾದ ಬಿಚೋಲಿ ಶಹರದ ಸಿಸಿಟಿವಿ ಫುಟೇಜ್ ತಪಾಸಣೆ ನಡೆಸಿದಾಗ ಚಂದ್ರಿಕಾ ಈ ವೃದ್ಧೆ ಕರ್ನಾಟಕದ ಬೆಳಗಾವಿಗೆ ತೆರಳುವ ಬಸ್ ಹತ್ತಿರುವುದು ಕಂಡುಬಂದಿದೆ. ಸಂಬಂಧಿಕರು ಬೆಳಗಾವಿಗೆ ತೆರಳಿ ಅಲ್ಲಿನ ಪೋಲಿಸರಿಗೆ ಮಾಹಿತಿ ನೀಡಿದ್ದರು. ಬೆಳಗಾವಿ ಪೋಲಿಸರು ಹಾಗೂ ಬೆಳಗಾವಿ ಸ್ಥಳೀಯ ನಿವಾಸಿಗಳ ಸಹಕಾರದಲ್ಲಿ ಈ ವೃದ್ಧ ಮಹಿಳೆ ಪತ್ತೆಗೆ ಸಾಧ್ಯವಾಗಿದೆ.