ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದ ರಾಜಕಾರಣದಲ್ಲಿ ಇಂದು ದೊಡ್ಡ ಬದಲಾವಣೆಯಾಗಿದೆ, ಗೋವಾ ವಿಧಾನಸಭೆಯ ಮಾಜಿ ಸಭಾಪತಿ ರಮೇಶ್ ತವಡಕರ್ ಹಾಗೂ ಶಾಸಕ ದಿಗಂಬರ್ ಕಾಮತ್ ರವರು ಗುರುವಾರ ಮಧ್ಯಾನ್ಹ 12 ಗಂಟೆಗೆ ಗೋವಾ ರಾಜಭವನದಲ್ಲಿ ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಗೋವಾ ರಾಜ್ಯಪಾಲ ಪುಸಾಪತಿ ಅಶೋಕ ಗಜಪತಿ ರಾಜು ರವರು ಪ್ರಮಾಣವಚನ ಬೋಧಿಸಿದರು.

ಗೋವಾ ರಾಜ್ಯಪಾಲರು ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಉಪಸ್ಥಿತಿಯಲ್ಲಿ ಈ ಪ್ರಮಾಣವಚನ ಸ್ವೀಕಾರ ಸಮಾರಂಭವು ನಡೆಯಿತು.

ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ ರಮೇಶ ತವಡಕರ್ ಸುದ್ಧಿಗಾರರೊಂದಿಗೆ ಮಾತನಾಡಿ- ನಾನು ವಿಧಾನಸಭೆಯ ಅಧ್ಯಕ್ಷನಾಗಿ ನನ್ನ ಕೆಲಸದಲ್ಲಿ ನಾನು ಸಮಾಧಾನವಾಗಿದ್ದೆ, ನಮ್ಮ ಪಕ್ಷದ ವರಿಷ್ಠರು ತೆಗೆದುಕೊಂಡಿರುವ ನಿರ್ಣಯವನ್ನು ಸ್ವಾಗತಿಸಿ ಇಂದು ಮಂತ್ರಿ ಸ್ಥಾನ ಸ್ವೀಕರಿಸುದ್ದೇನೆ ಎಂದರು. ವಿಧಾನಸಭೆಯ ಅಧ್ಯಕ್ಷನಾಗಿದ್ದಾಗ ನನಗೆ ಯಾವುದೇ ತೊಂದರೆಯಾಗಿಲ್ಲ. ವಿರೋಧ ಪಕ್ಷದ ಶಾಸಕರು, ಅದರಲ್ಲೂ ವಿಶೇಷವಾಗಿ ವಿರೋಧ ಪಕ್ಷದ ನಾಯಕರು ನನಗೆ ಸಂಪೂರ್ಣ ಬೆಂಬಲ ನೀಡಿದ್ದರು, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಕಳೆದ ಸುಮಾರು ಒಂದು ವರ್ಷದಿಂದ ಮುಂದೂಡುತ್ತಲೇ ಇದ್ದ ಮಂತ್ರಿಮಂಡಲ ವಿಸ್ತರಣೆ ಕಾರ್ಯ ಇದೀಗ ಪೂರ್ಣಗೊಂಡಂತಾಗಿದೆ. ಪ್ರಿಯೋಳ ಕ್ಷೇತ್ರದ ಶಾಸಕ ಗೋವಿಂದ ಗಾವಡೆ ರವರು ಕೆಲ ದಿನಗಳ ಹಿಂದೆಯೇ ಮಂತ್ರಿಮಂಡಲದಿಂದ ಕೈಬಿಡಲಾಗಿತ್ತು. ನಿನ್ನೆ ಅಲೆಕ್ಸ ಸಿಕ್ಕೇರಾ ರವರು ತಮ್ಮ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಖಾಲಿಯಾಗಿದ್ದ ಈ ಎರಡೂ ಮಂತ್ರಿ ಸ್ಥಾನ ಇದೀಗ ಭರ್ತಿಯಾದಂತಾಗಿದೆ.

ಇದೀಗ ಮಂತ್ರಿಮಂಡಲ ವಿಸ್ತರಣೆ ಕಾರ್ಯ ಪೂರ್ಣಗೊಂಡಿದ್ದರಿಂದ ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಸಕ ಸಂಕಲ್ಪ ಅಮೋಣಕರ್ ಹಾಗೂ ಕಲಂಗುಟ್ ಶಾಸಕ ಮೈಕಲ್ ಲೋಬೊ ರವರಿಗೆ ಕೊಂಚ ನಿರಾಸೆಯಾಗುವಂತಾಗಿದೆ.