ಸುದ್ಧಿಕನ್ನಡ ವಾರ್ತೆ
ಮಹದಾಯಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ಮಹದಾಯಿ ವಿಷಯವು ನಮಗೆ ಅತ್ಯಂತ ಸಂವೇದನಾಶೀಲವಾಗಿದೆ. ಈ ವಿಷಯದಲ್ಲಿ ನಾವು ಸಂಪೂರ್ಣ ಗಂಭೀರವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಗೋವಾ ವಿಧಾನಸಭಾ ಅಧಿವೇಶನ ಆರಂಭಕ್ಕೂ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು- ಮಹದಾಯಿ ವಿಷಯದಲ್ಲಿ ಕರ್ನಾಟಕದ ಕಾಂಗ್ರೇಸ್ ನಾಯಕರು ನಿರಾಸೆಯಿಂದ ಗೋವಾ ಸರ್ಕಾರದ ಮೇಲೆ ಠೀಕೆ ಮಾಡುತ್ತಿದ್ದಾರೆ. ಅವರ ಮಾತಿನಲ್ಲಿ ಕೆಳಮಟ್ಟದ ಭಾಷೆ ಕಂಡುಬರುತ್ತದೆ. ಇಂತಹ ಹೇಳಿಕೆ ನೀಡುವಲ್ಲಿ ಒಬ್ಬರಿಗೊಬ್ಬರು ಸ್ಫರ್ಧೆಯೊಡ್ಡಿದಂತೆ ಕಂಡುಬರುತ್ತಿದೆ. ಯಾರು ಹೆಚ್ಚು ಕೆಳಮಟ್ಟದ ಭಾಷೆಯಲ್ಲಿ ಮಾತನಾಡುತ್ತಾರೆ ಎಂಬ ಸ್ಫರ್ಧೆಯಿದ್ದಂತಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ನೀಡಿದ್ದ ಹೇಳಿಕೆಯ ವಿರುದ್ಧ ಠೀಕಾ ಪ್ರಹಾರ ನಡೆಸಿದ್ದಾರೆ.
ಅವರು ಏನು ಬೇಕಾದರೂ ಮಾತನಾಡಬಹುದು, ಅದಕ್ಕೆ ನಾನು ಯಾವುದೇ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ನನಗೆ ಯಾರು ಏನು ಹೇಳುತ್ತಾರೆಂಬ ಚಿಂತೆಯಿಲ್ಲ. ಅವರು ತಮ್ಮ ಕಾಂಗ್ರೇಸ್ ಸಂಸ್ಕøತಿಯನ್ನು ತೋರಿಸುತ್ತಿದ್ದಾರೆ. ಮಹದಾಯಿ ರಕ್ಷಿಸುವ ನಮ್ಮ ಹೋರಾಟ ಎಂದಿಗೂ ನಿಲ್ಲುವುದಿಲ್ಲ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಸ್ಪಷ್ಟ ಹೇಳಿಕೆ ನೀಡಿದ್ದಾರೆ.
ಮಹದಾಯಿ ವಿಷಯದಲ್ಲಿ ಕೇಂದ್ರ ಸರ್ಕಾರದೊಂದಿಗೆ ಇರಲಿ, ನ್ಯಾಯಾಲಯದಲ್ಲಿಯೂ ಕೂಡ ನಮ್ಮ ಮನವಿ ಹಾಗೂ ಹೋರಾಟ ಮುಂದುವರೆಯಲಿದೆ. ಗೋವಾ ವಿಧಾನಸಭೆಗೆ ಬರುವ ಮುನ್ನವೇ ಮಹದಾಯಿ ವಿಷಯದಲ್ಲಿ ನಮ್ಮ ಹೋರಾಟ ಆರಂಭದಲ್ಲಿದೆ. ಕೇಂದ್ರ ಸರ್ಕಾರದೊಂದಿಗೆ ಈ ಕುರಿತಂತೆ ಪತ್ರವ್ಯವಹಾರ ಹಾಗೂ ಮನವಿ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಕಿಡಿಕಾರಿದ್ದಾರೆ.