ಸುದ್ಧಿಕನ್ನಡ ವಾರ್ತೆ
ಗೋವಾ ರಾಜ್ಯಾದ್ಯಂತ ಕಳೆಯ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಜುಲೈ 24 ರಂದು ಗುರುವಾರ ಗೋವಾ ರಾಜ್ಯದಲ್ಲಿ ಅತಿವೃಷ್ಠಿಯ “ರೆಡ್ ಅಲರ್ಟ” ಜಾರಿಗೊಳಿಸಲಾಗಿದೆ. ಉತ್ತರ ಗೋವಾ ಮತ್ತು ದಕ್ಷಿಣ ಗೋವಾ ಈ ಎರಡೂ ಜಿಲ್ಲೆಗಳಲ್ಲಿ ಈ ಮುನ್ನೆಚ್ಚರಿಕೆ ನೀಡಲಾಗಿದೆ. ಸುಮಾರು 60 ಕಿಮಿ ವೇಗದಲ್ಲಿ ಗಾಳಿಯ ಜೊತೆಗೆ ಅತಿವೃಷ್ಠಿಯಾಗುವ ಸಾಧ್ಯತೆಯಿರುವುದರಿಂದ ರಾಜ್ಯದ ಜನತೆ ಎಚ್ಚರಿಕೆಯಿಂದಿರುವುವಂತೆ ಸೂಚನೆ ನೀಡಲಾಗಿದೆ.

ಗೋವಾ ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಮಳೆ ತೀವ್ರಗೊಂಡಿದೆ. ರಾಷ್ಟ್ರೀಯ ಮಹಾಸಾಗರ ಸೂಚನಾ ಸೇವಾ ಕೇಂದ್ರವು ರಾಜ್ಯದ ಸಮುದ್ರದಲ್ಲಿ 3.6 ರಿಂದ 4.2 ಮೀಟರ್ ಎತ್ತರದ ಅಲೆ ಏಳುವ ಸಾಧ್ಯತೆಯಿದೆ ಎಂಬ ಮುನ್ನೆಚ್ಚರಿಕೆಯನ್ನೂ ನೀಡಿದೆ. ಕಳೆದ 24 ಗಂಟೆಗಳಲ್ಲಿ ಗೋವಾ ರಾಜ್ಯದಲ್ಲಿ 2.40 ಇಂಚು ಮಳೆ ದಾಖಲಾಗಿದೆ. ಇದುವರೆಗೂ ಗೋವಾದಲ್ಲಿ ಒಟ್ಟೂ ಸರಾಸರಿ 67.10 ಇಂಚು ಮಳೆಯಾಗಿರುವುದಾಗಿ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದೀಗ ಗುರುವಾರ ಜುಲೈ 24 ರಂದು ಅತಿವೃಷ್ಠಿಯಾಗಲಿರುವ ಎಚ್ಚರಿಕೆ ನೀಡಲಾಗಿದೆ.

ಜುಲೈ 24 ರಂದು ಅತಿವೃಷ್ಠಿಯಾಗಲಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸಾರ್ವಜನಿಕರು ಅಗತ್ಯ ಎಚ್ಚರಿಕೆ ತೆಗೆದುಕೊಳ್ಳಬೇಕು. ನೆರೆ ಪರಿಸ್ಥಿತಿಯಿದ್ದರೆ ಸುರಕ್ಷಿತ ಸ್ಥಳಕ್ಕೆ ಮುಂಚೆಯೇ ತೆರಳಬೇಕು. ದುರ್ಘಟನೆಯನ್ನು ತಪ್ಪಿಸಲು ಜನರು ಸರ್ಕಾರದ ಸೂಚನೆಯನ್ನು ಪಾಲನೆ ಮಾಡಬೇಕು. ಹವಾಮಾನ ಇಲಾಖೆ ನೀಡಿರುವ ಸಂದೇಶವನ್ನು ಗಮನದಲ್ಲಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ.