ಸುದ್ಧಿಕನ್ನಡ ವಾರ್ತೆ
ಕರ್ನಾಟಕದಿಂದ ಗೋವಾದ ಗಡಿ ಭಾಗಕ್ಕೆ ಬಂದು ಜೂಜಾಟ ಆಡುತ್ತಿದ್ದ ವೇಳೆ ಗೋವಾ ಪೋಲಿಸರು ಧಾಳಿ ನಡೆಸಿ ಕರ್ನಾಟಕದ ವಿವಿಧ ಭಾಗಗಳ 40 ಜನರನ್ನು ಬಂಧಿಸಿ ಅವರಿಂದ 16 ಲಕ್ಷ ರೂ ಮೌಲ್ಯದ ವಿವಿಧ ವಸ್ತುಗಳನ್ನು ವಷಪಡಿಸಿಕೊಂಡ ಘಟನೆ ಗೋವಾ ರಾಜ್ಯದ ಪೋಲೆಂ ಪೋಲಿಸ್ ಠಾಣಾ ವ್ಯಾಪ್ತಿಯ ಲೋಲೆಯಂ ನಲ್ಲಿ ಮಂಗಳವಾರ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಕನ್ನಡ ಜಿಲ್ಲೆಯ ಕುಮಟಾ, ಯಲ್ಲಾಪುರ,ಶಿವಮೊಗ್ಗ ಹಾಗೂ ಗೋವಾ ಮೂಲದವರೂ ಸೇರಿದಂತೆ ಒಟ್ಟೂ 40 ಜನ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಗೋವಾ ಕಾರವಾರ ಗಡಿ ಭಾಗವಾದ ಲೋಲಯೆಂ ಗ್ರಾಮದ ದುಲ್ ಗಳ್ಳಿಯ ತೆಲ್ಮಾ ಎಂಬ ಮನೆಯಲ್ಲಿ ಕಳೆದ ಹಲವು ತಿಂಗಳಿಂದ ಜೂಜಾಟ ನಡೆಸಿಕೊಂಡು ಬಂದಿದ್ದರು ಎನ್ನಲಾಗಿದ್ದು, ಈ ಕುರಿತಂತೆ ನಿಖರ ಮಶಾಹಿತಿಯ ಮೇಲೆ ಪೋಲಿಸರು ಜೂಜು ಅಡ್ಡೆಯ ಮೇಲೆ ಧಾಳಿ ನಡೆಸಿ ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಎಲ್ಲರನ್ನೂ ಬಂಧಿಸಿದ್ದಾರೆ. ಈ ಅಕ್ರಮ ಚಟುವಟಿಕೆಯಲ್ಲಿ ಉತ್ತರಕನ್ನಡ ಜಿಲ್ಲೆಯವರೇ ಹೆಚ್ಚಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೋಲಿಸರು ಧಾಳಿಯ ವೇಳೆ ಕೆಎ-30, ಎ-6586 ಕ್ರಮಾಂಕದ ಕಾರು, 40 ಮೊಬೈಲ್ ಪೋನ್, ಕಂಪೂಟರ್ ಸೇರಿದಂತೆ ಇನ್ನಿತರ ಉಪಕರಣಗಳು ಸೇರಿ ಒಟ್ಟೂ 16,35,000 ರೂ ಮೌಲ್ಯದ ವಸ್ತುಗಳನ್ನು ಗೋವಾ ಪೋಲಿಸರು ವಷಪಡಿಸಿಕೊಂಡಿದ್ದಾರೆ.
ಗೋವಾ ಪೋಲಿಸರು ಈ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಪಿಜಿ ಎಕ್ಟ ಸೆಕ್ಷನ್ 3 ಮತ್ತು 4 ಸೇರಿದಂತೆ ಭಾರತೀಯ ದಂಡ ಸಂಹಿತೆ ಕಾಯ್ದೆ ಸೆಕ್ಷನ್ 112 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.