ಸುದ್ಧಿಕನ್ನಡ ವಾರ್ತೆ
 ಬೆಳಗಾವಿ-ಗೋವಾ ಸಂಪರ್ಕಿಸುವ ಅನಮೋಡ್ ಘಾಟ್ ರಸ್ತೆಯಲ್ಲಿ ಶನಿವಾರ ಬೆಳಗಿನ ಜಾವ ಭಾರಿ ಭೂಕುಸಿತ (Landslide) ಉಂಟಾಗಿ ಭಾರಿ ಪ್ರಮಾಣದಲ್ಲಿ ರಸ್ತೆ ಕುಸಿದುಹೋಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟಕ್ಕೆ 60 ದಿನಗಳ ( 60 days)ಕಾಲ ದಕ್ಷಿಣ ಗೋವಾ ಜಿಲ್ಲಾಡಳಿತ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಅನಮೋಡ ಘಾಟ್ ರಸ್ತೆ  NH-748 ರಲ್ಲಿ ಶನಿವಾರ ಬೆಳಗಿನ ಜಾವ ಭಾರಿ ಪ್ರಮಾಣದಲ್ಲಿ ಭೂ ಕುಸಿತವುಂಟಾಗಿತ್ತು. ಈ ಘಟನೆಯಲ್ಲಿ ಅರ್ಧ ರಸ್ತೆಯೇ ಕುಸಿದು ಹೋಗಿರುವುದರಿಂದ ಈ ಭಾಗದಲ್ಲಿ ವಾಹ ಸಂಚಾರ ಅಪಾಯಕರ ಎಂಬಂತಾಗಿದೆ. ಭಾರಿ ವಾಹನಗಳು ಈ ಭಾಗದಲ್ಲಿ ಓಡಾಟ ನಡೆಸಿದರೆ ರಸ್ತೆ ಇನ್ನಷ್ಟು ಕುಸಿಯವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸಪ್ಟೆಂಬರ್ 2 ರ ವರೆಗೆ ಅಂದರೆ 60 ದಿನಗಳ ವರೆಗೆ ಈ ಮಾರ್ಗದಲ್ಲಿ ಭಾರಿ ವಾಹನಗಳ ಓಡಾಟಕ್ಕೆ ದಕ್ಷಿಣ ಗೋವಾ ಜಿಲ್ಲಾಡಳಿತ ನಿಷೇಧ ಹೇರಿ ಆದೇಶ ಹೊರಡಿಸಿದೆ.

ಅನಮೋಡ ಘಾಟ್ ರಸ್ತೆಯು ಗೋವಾ-ಬೆಳಗಾವಿ (Goa -Belagavi) ಸಂಪರ್ಕಿಸುವ ಮುಖ್ಯ ರಸ್ತೆಯಾಗಿರುವುದರಿಂದ ಸಹಜವಾಗಿಯೇ ಪ್ರತಿದಿನ ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟ ಇರುತ್ತದೆ. ಆದರೆ ಇದೀಗ ಈ ಮಾರ್ಗಮಧ್ಯೆ ಭೂ ಕುಸಿತವುಂಟಾಗಿರುವುದು ವಾಹನಗಳ ಸಂಚಾರಕ್ಕೆ ಹೆಚ್ಚಿನ ತೊಂದರೆಯಾಗಿದೆ. ಸದ್ಯ ಭೂ ಕುಸಿತವಾದ ಸ್ಥಳದಲ್ಲಿ ಅರ್ಧ ರಸ್ತೆ ಮಾತ್ರ ವಾಹನಗಳ ಓಡಾಟಕ್ಕೆ ಲಭ್ಯವಿರುವುದರಿಂದ ಇಲ್ಲಿ ಭಾರಿ ಟ್ರಾಫಿಕ್ ಜಾಮ್ ಸಂಭವಿಸುತ್ತಿದೆ.

ಪ್ರತಿದಿನ ಕರ್ನಾಟಕದಿಂದ ಗೋವಾಕ್ಕೆ ಅಗತ್ಯ ವಸ್ತುಗಳ (Necessary items)ಪೂರೈಕೆಯಾಗುತ್ತದೆ. ಅದರಲ್ಲೂ ಹಾಲು,ತರಕಾರಿ, ಕಿರಾಣಿ, ಹೂವು, ಹಣ್ಣು ಸೇರಿದಂತೆ ಹೆಚ್ಚಿನ ಅಗತ್ಯ ವಸ್ತುಗಳು ಬೆಳಗಾವಿ ಭಾಗದಿಂದಲೇ ಗೋವಾಕ್ಕೆ ಬರುತ್ತದೆ. ಆದರೆ ಸದ್ಯ ಬೆಳಗಾವಿ ಗೋವಾ ಸಂಪರ್ಕಿಸುವ ಚೋರ್ಲಾ ಮತ್ತು ಅನಮೋಡ ಘಾಟ್ ರಸ್ತೆಗಳಲ್ಲಿ ಭೂಕುಸಿತದಂತಹ ಘಟನೆಗಳು ನಡೆಯುತ್ತಿರುವುದು ಪ್ರತಿದಿನ ಗೋವಾಕ್ಕೆ ಅಗತ್ಯ ವಸ್ತುಗಳ ಪೂರೈಕೆಗೆ ಕೂಡ ತೊಂದರೆಯುಂಟಾಗುವಂತಾಗುತ್ತಿದೆ.