ಸುದ್ಧಿಕನ್ನಡ ವಾರ್ತೆ
ಪಣಜಿ: ಯಕ್ಷಗಾನ ಕಲೆಯೊಂದೇ ಆರಾಧನೆಗೆ ಯೋಗ್ಯವಾಗಿದೆ. ಈವತ್ತಿಗೂ ಕೂಡ ಹರಕೆ ರೂಪದಲ್ಲಿ ಎಷ್ಟೋ ವರ್ಷಗಳ ಕಾಲ ಕಟಿಲು,ಮಂದಾರ್ತೆ, ಪಾವಂಜೆ ಇಂತಹ ಮೇಳಗಳಲ್ಲಿ ಮೂವತ್ತು ನಲವತ್ತು ವರ್ಷಗಳ ವರೆಗೆ ಹರಕೆ ಆಟ ಬುಕಿಂಗ್ ಆಗಿರುತ್ತದೆ. ಯಕ್ಷ ಎಂದರೆ ಪೂಜೆ ಎಂದರ್ಥ, ಗಾನದ ನೃತ್ಯದ ರೂಪದಲ್ಲಿ ಪೂಜೆ ಎಂದರ್ಥ. ಗೋವಾದಲ್ಲಿ ಇಡೀ ದೇವಿ ಮಹಾತ್ಮೆ ಆಗುತ್ತದೆ ಎಂದರೆ ನೀವೆಲ್ಲ ಪುಣ್ಯಾತ್ಮರು ಎಂದು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ ಶೆಟ್ಟಿ ಪಟ್ಲ ನುಡಿದರು.

ಜೂನ್ 22 ರಂದು ಭಾನುವಾರ ಸಂಜೆ ಪಣಜಿಯ ಮೆನೆಜಸ್ ಬ್ರಗಾಂಜ ಸಭಾಗೃಹದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಗೋವಾ ಘಟಕದ ದ್ವಿತೀಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ರವರ ಸಾರಥ್ಯದಲ್ಲಿ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯೊಂದಿಗೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ನಾಗವ್ವಜ ಕ್ಷೇತ್ರ ಪಾವಂಜೆ ರವರಿಂದ ಶ್ರೀ ದೇವಿ ಮಹಾತ್ಮೆ ಸಂಪೂರ್ಣ ಯಕ್ಷಗಾನ ಪ್ರದರ್ಶನ ಯಶಸ್ವಿಯಾಯಿತು. ಈ ಸಂದರ್ಭದಲ್ಲಿ ಆಯೋಜಿಸಿದ್ದ ಸಭಾಕಾರ್ಯಕ್ರಮವನ್ನುದ್ದೇಶಿಸಿ ಸತೀಶ್ ಶೆಟ್ಟಿ ರವರು ಮಾತನಾಡುತ್ತಿದ್ದರು.

ದೇವಿಯನ್ನು ನೋಡಲಿಕ್ಕೆ ನೀವು ಕಾತರದಿಂದಿರುವುದಲ್ಲ, ದೇವಿಯು ನಿಮ್ಮನ್ನು ನೋಡಲು ಬಂದಿದ್ದಾಳೆ. ಈ ವೇದಿಕೆಯಲ್ಲಿ ಇಂದು ದೇವಿ ಮಹಾತ್ಮೆ ದೇವಿಯ ಪ್ರತ್ಯಕ್ಷ ಆಗುತ್ತದೆ ಎಂದಾದರೆ ನಾವೆಲ್ಲರೂ ದೇವಿಯ ಆರಾದನೆಯಲ್ಲಿ ತೊಡಗಿದ್ದೇವೆ ಎಂದರ್ಥ. ಎಲ್ಲರಿಗೂ ದುರ್ಗೆಯ ಆರಾಧನೆಯ ಫಲ ಸಿಕ್ಕೇ ಸಿಗುತ್ತದೆ ಎಂದು ಪಟ್ಲ ಸತೀಶ್ ಶೆಟ್ಟಿ ನುಡಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ, ನಾಟಕ ರಂಗಭೂಮಿ, ದೈವಾರಾಧನೆ, ಹಾಗೂ ಕಂಬಳ ಕ್ಷೇತ್ರದಲ್ಲಿ ದುಡಿಯುವಂತಹ ಎಲ್ಲ ಕಲಾವಿದರುಗಳಿಗೆ ಸುಮಾರು 15 ಕೋಟಿ ರೂ ಗಳವರೆ ನಾವು ಬೇರೆ ಬೇರೆ ರೂಪದಲ್ಲಿ ಕಳೆದ 10 ವರ್ಷದಲ್ಲಿ ನೀಡಿದ್ದೇವೆ. ಯಕ್ಷಗಾನದ ಇತಿಹಾಸದಲ್ಲಿ ಇದು ಪ್ರಪ್ರಥಮ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಸತೀಶ ಶೆಟ್ಟಿ ಪಟ್ಲ ನುಡಿದರು.