ಸುದ್ಧಿಕನ್ನಡ ವಾರ್ತೆ
ಪಣಜಿ: ಮಳೆಗಾಲದ ಸಂದರ್ಭದಲ್ಲಿ ಗೋವಾದಲ್ಲಿ ನಿಸರ್ಗನ ಅನುಭವ ಪಡೆಯಲು ಗೋವಾ ಪ್ರವಾಸೋದ್ಯಮ ವಿಕಾಸ ಮಹಾಮಂಡಳ (GTDC) ಸಜ್ಜಾಗಿದೆ. ಜೂನ್ 29 ರಂದು ಭಾನುವಾರ ಗೋವಾದ ಪ್ರಸಿದ್ಧ ತಾಂಬಡಿ ಸುರ್ಲಾ ಜಲಪಾತಕ್ಕೆ ಒಂದು ವಿಶೇಷ ಮಾನ್ಸೂನ್ ಟ್ರ್ಯಾಕಿಂಗ್ ಆಯೋಜಿಸಿಸುವುದಾಗಿ ಪ್ರವಾಸೋದ್ಯಮ ಮಹಾಮಂಡಳ ಘೋಷಿಸಿದೆ.

ಭಗವಾನ್ ಮಹಾವೀರ ವನ್ಯಜೀವಿ ಅಭಯಾರಣ್ಯದಲ್ಲಿ ನಯನಮನೋಹರ ತಾಂಬಡಿ ಸುರ್ಲಾ (Tambadi Surla) ಜಲಪಾತವಿದೆ. ಈ ಜಲಪಾತವು ಮಳೆಗಾಲದ ಸಂದರ್ಭದಲ್ಲಂತೂ ಅತ್ಯಂತ ಆಕರ್ಷಣೀಯ ಜಲಪಾತಗಳಲ್ಲೊಂದಾಗಿದೆ. ಜೂನ್ 29 ರಂದು ಟ್ರ್ಯಾಕಿಂಗ ಸಂದರ್ಭದಲ್ಲಿ ಅಲ್ಲಿಯೇ ಇರುವ 12 ನೇಯ ಶತಮಾನದ ಏಕಶಿಲಾಮಯ ಮಹಾದೇವ ದೇವಸ್ಥಾನದ ದರ್ಶನ ಪಡೆಯುವ ಸುಸಂಧಿ ಕೂಡ ಲಭಿಸಲಿದೆ.

ಮಹಾದೇವ ದೇವಸ್ಥಾನದಿಂದ ತಾಂಬಡಿ ಸುರ್ಲಾ ಜಲಪಾತದ ( Tambadi Surla Waterfall) ಮಾರ್ಗವು ದಟ್ಟ ಅರಣ್ಯವಾಗಿದೆ. ಈ ಅರಣ್ಯವು ವಿವುಧ ಪ್ರಜಾತಿಯ ಪಕ್ಷಿ,ಪ್ರಾಣಿ ಗಳಿಂದ ಕೂಡಿದೆ. ಈ ಹಚ್ಚ ಹಸಿರಿನ ನಿಸರ್ಗ ಹೊಸ ಅನುಭವ ನೀಡಲಿದೆ. ಈ ತಾಣದಲ್ಲಿ ಶುದ್ಧ ಬೆಳ್ಳನೆಯ ನೀರು ಜಲಪಾತವಾಗು ಧುಮ್ಮಿಕ್ಕುತ್ತದೆ.

ಸುಮಾರು 90 ನಿಮಿಷಗಳ ಟ್ರ್ಯಾಕಿಂಗ್ ಉತ್ತಮ ದೇಹ ಆರೋಗ್ಯ ಹೊಂದಿದವರಿಗೆ ಮಾತ್ರವೇ ಆಗಿದೆ. ಈ ಟ್ರ್ಯಾಕಿಂಗ್ ಸಾಹಸಿಗರಿಗೆ, ಟ್ರ್ಯಾಕಿಂಗ್ ಉತ್ಸಾಹಿಗಳಿಗೆ ಫರ್ಫೆಕ್ಟ ಆಗಿದೆ. ಈ ಟ್ರ್ಯಾಕಿಂಗ್ ಗೆ ತೆರಳಬೇಕಾದರೆ 1400 ರೂ ಶುಲ್ಕ ಖಡ್ಡಾಯವಾಗಿದೆ. ಇದರಲ್ಲಿ ಸಾರಿಗೆ,ಮಾರ್ಗದರ್ಶಕರು, ಮಧ್ಯಾನ್ಹದ ಊಟ ಒಳಗೊಂಡಿದೆ.