ಸುದ್ಧಿಕನ್ನಡ ವಾರ್ತೆ
ಪಣಜಿ: ಕಳೆದ ಕೆಲ ದಿನಗಳಿಂದ ಕರ್ನಾಟಕ ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವೆಡೆ ದುರ್ಘಟನೆಗಳೂ ಹೆಚ್ಚುತ್ತಿವೆ. ಗೋವಾ ಬೆಳಗಾವಿ (Goa -Belagavi) ಸಂಪರ್ಕಿಸುವ ಚೋರ್ಲಾ ಘಾಟ್ (Chorla Ghat) ರಸ್ತೆಯಲ್ಲಿ ಶುಕ್ರವಾರ ಸಂಜೆ ಮರ ಬಿದ್ದು ಮತ್ತು ಗುಡ್ಡ ಗುಸಿತವುಂಟಾಗಿ ಒಂದು ಗಂಟೆ ವಾಹನ ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ನಡೆದಿದೆ. ಈ ಘಟನೆಯಿಂದಾಗಿ ರಸ್ತೆಯ ಎರಡೂ ಬದಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಅದೃಷ್ಠವಶಾತ್ ಮರ ಬೀಳುವ ಸಂದರ್ಭದಲ್ಲು ಯಾವುದೇ ವಾಹನಗಳಿಲ್ಲದ ಕಾರಣ ಅನಾಹುತ ತಪ್ಪಿದಂತಾಗಿದೆ. ಚೋರ್ಲಾ ಘಾಟ್ ಮಾರ್ಗವು ಬೆಳಗವಾವಿ ಗೋವಾ ಸಂಪರ್ಕಿಸುವ ಮುಖ್ಯ ರಸ್ತೆಯಾಗಿರುವುದರಿಂದ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳ ಓಡಾಟವಿರುತ್ತದೆ. ಮರ ಬಿದ್ದಿದ್ದರಿಂದ ಒಂದು ಗಂಟೆ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಘಟನೆಯ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಗೋವಾದ ಬಿಚೋಲಿ ಟ್ರಾಫಿಕ್ ಪೋಲಿಸರು ಘಟನಾ ಸ್ಥಳಕ್ಕೆ ತೆರಳಿದ್ದರು. ಟ್ರಾಫಿಕ್ ಪೋಲಿಸ್ ಸೆಲ್ ಇನ್ ಚಾರ್ಜ ಕಿಶೋರ ಅಮೋಣಕರ್ ರವರ ಮಾರ್ಗದರ್ಶನದಲ್ಲಿ ಜೆಸಿಬಿ ಸಹಾಯದಿಂದ ಮರವನ್ನು ಮತ್ತು ರಸ್ತೆಯ ಮೇಲೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲಾಯಿತು.