ಸುದ್ದಿಕನ್ನಡ ವಾರ್ತೆ
Goa :ಕರ್ನಾಟಕದಿಂದ ಗೋವಾಕ್ಕೆ ಸ್ವಂತ ವಾಹನದಲ್ಲಿ ಬರುವ ಪ್ರವಾಸಿಗರೇ ಎಚ್ಚರ..ಎಚ್ಚರ…ಎಚ್ಚರ…. ಹೌದು ಮೀವು ಗೋವಾಕ್ಕೆ ಸ್ವಂತ ವಾಹನದಲ್ಲಿ ಬರುವ ತಯಾರಿ ನಡೆಸಿದ್ದರೆ ಈ ಸುದ್ದಿ ಮೊದಲು ಓದಿ. ನಿಮಗೆ ಅನುಕೂಲವಾಗಲಿದೆ.
ಗೋವಾ ರಾಜ್ಯದಲ್ಲಿ ಎಲ್ಲೆಡೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸ್ಪೀಡ್ ಲಿಮಿಟ್ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇಂತಹ ಸ್ಥಳಗಳಲ್ಲಿ ಸೂಚನೆ ನೀಡಿರುವುದಕ್ಕಿಂತ ಹೆಚ್ಚು ವೇಗವಾಗಿ ವಾಹನ ಓಡಿಸಿದರೆ ನಿಮಗೆ ಭಾರಿ ದಂಡ ಬೀಳಲಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಘಟನೆ ನಡೆದಿದೆ. ಸ್ಪೀಡ್ ಲಿಮಿಟ್ ದಾಟಿದ ನಂತರ ಕೆಲವೇ ನಿಮಿಷದಲ್ಲಿ ನಿಮಗೆ ನೋಟಿಸ್ ಬರುವುದು ಪಕ್ಕಾ.
ಗೋವಾ ರಾಜ್ಯದಲ್ಲಿ ಸ್ಪೀಡ್ ಲಿಮಿಟ್ ಅಳವಡಿಸಿರುವ ಸ್ಥಳಗಳಲ್ಲಿ ಅಲ್ಲಲ್ಲಿ ಕ್ಯಾಮರಾಗಳನ್ನೂ ಅಳವಡಿಸಲಾಗಿದೆ. ಇನ್ನೂ ಕೆಲವೆಡೆ ಟ್ರಾಫಿಕ್ ಪೋಲಿಸರು ಯಾವುದೋ ಮೂಲೆಯಲ್ಲಿ ಕ್ಯಾಮರಾ ಹಿಡಿದು ನಿಂತಿರುತ್ತಾರೆ. ಇದನ್ನು ಗಮನಿಸದೆಯೇ ನೀವು ರಸ್ತೆ ಬದಿಯಲ್ಲಿ ನೀಡಿರುವ ಸ್ಪೀಡ್ ಲಿಮಿಟ್ ಸೂಚನೆಗಿಂತ ಹೆಚ್ಚು ವೇಗವಾಗಿ ಸಾಗಿದರೆ ಕೂಡಲೇ ದಂಡ ಭರಿಸುವಂತೆ ನಿಮ್ಮ ರಜಿಸ್ಟರ್ ಮೊಬೈಲ್ ಗೆ ನೋಟಿಸ್ ಬರಲಿದೆ. ಈ ಹಣ ಪಾವತಿಸದಿದ್ದರೆ ಹದಿನೈದು ದಿನಗಳಲ್ಲಿ ಕೋರ್ಟ ನೋಟಿಸ್ ಬರುವುದು ಪಕ್ಕಾ.
ಕಾರವಾರ ಗಡಿಯಿಂದ ಗೋವಾಕ್ಕೆ ಬರುವಾಗ ನೇರವಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ 70 ಕಿ.ಮಿ ವೇಗ ಮಿತಿ ಸೂಚನಾ ಫಲಕವಿದೆ. ಇದೇನಿದು ಇಷ್ಟು ನೇರವಾಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಷ್ಟು ಕಡಿಮೆ ವೇಗದಲ್ಲಿ ಸಾಗುವುದೇ…? ಎಂದು ನಿರ್ಲಕ್ಷಿಸಿದ ಅದೆಷ್ಟೋ ಜನ ವಾಹನ ಸವಾರರು ಹೆಚ್ಚಿನ ದಂಡ ತೆತ್ತಿದ್ದಾರೆ. ಅಂತೆಯೇ ಗೋವಾದಲ್ಲಿ ಬಹುತೇಕ ಸೇತುವೆಯ ಮೇಲೆ 20 ಕಿಮಿ ಅಥವಾ 30 ಕಿಮಿ ವೇಗ ಮಿತಿ ನಾಮ ಫಲಕ ಇದೆ ಇದನ್ನು ಗಮನಿಸದೆಯೇ ನಿರ್ಲಕ್ಷ ಮಾಡಿದರೂ ನೀವು ದಂಡ ತೆರುವುದು ಅನಿವಾರ್ಯವಾಗಲಿದೆ.
ಅಟಲ್ ಸೇತುವೆಯ ಮೇಲೆ ದ್ವಿಚಕ್ರ ವಾಹನಕ್ಕೆ ನಿಷೇಧ…
ಹೌದು ಗೋವಾ ರಾಜಧಾನಿ ಪಣಜಿಯಲ್ಲಿರುವ ಅಟಲ್ ಸೇತುವೆಯ ಮೇಲೆ ದ್ವಿಚಕ್ರ ವಾಹನ ಸವಾರಿಗೆ ನಿಷೇಧವಿದೆ. ಇದನ್ನು ಗಮನಿಸದೆಯೇ ಗೋವಾಕ್ಕೆ ಬರುವ ಅದೆಷ್ಟೋ ಪ್ರವಾಸಿಗರು ಅಟಲ್ ಸೇತುವೆಯ ಮೇಲೆ ದ್ವಿಚಕ್ರ ವಾಹನ ಓಡಿಸಿ ದಂಡ ತೆರುತ್ತಾರೆ.
ಇದರಿಂದಾಗಿ ಕರ್ನಾಟಕದಿಂದ ಗೋವಾಕ್ಕೆ ಬರುವ ಪ್ರವಾಸಿಗರು ರಸ್ತೆಯ ಬದಿಯಲ್ಲಿರುವ ಸೂಚನಾ ಫಲಕಗಳನ್ನು ನೋಡಿ ವಾಹನ ಚಲಾಯಿಸಿದರೆ ಹೆಚ್ಚು ಒಳ್ಳೆಯದು