ಸುದ್ದಿಕನ್ನಡ ವಾರ್ತೆ
Goa: ಗೋವಾದ ಬಿಚೋಲಿಮ್ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶದ್ವಾರದಲ್ಲಿ “ಮಾಧ್ಯಮ ವ್ಯಕ್ತಿಗಳಿಗೆ ಪ್ರವೇಶವಿಲ್ಲ” ಎಂದು ಬರೆದಿದ್ದ ವಿವಾದಾತ್ಮಕ ಫಲಕವನ್ನು ಪತ್ರಕರ್ತರು ಮತ್ತು ಪತ್ರಿಕಾ ಸಂಸ್ಥೆಗಳಿಂದ ತೀವ್ರ ವಿರೋಧದ ನಂತರ ತೆಗೆದುಹಾಕಲಾಗಿದೆ.

ಗೋವಾ ರಾಜ್ಯ ಪತ್ರಕರ್ತರ ಸಂಘಟನೆಯ ಅಧ್ಯಕ್ಷ ರಾಜತಿಲಕ್ ನಾಯಕ್ ಮಂಡಳಿಯ ಈ ನಿರ್ಧಾರ ಸ್ವೀಕಾರಾರ್ಹವಲ್ಲ ಎಂದು ಖಂಡಿಸಿದರು. ಜೂನ್ 7 ರಂದು ಗೋವಾ ಮೆಡಿಕಲ್ ಕಾಲೇಜಿನ ಎಮರ್ಜನ್ಸಿ ವಾರ್ಡ್‍ನಲ್ಲಿ ರೆಕಾರ್ಡ್ ಮಾಡಲಾದ ಡಾ. ರುದ್ರೇಶ್ ಕುಟ್ಟಿಕರ್ ಅವರ ವೀಡಿಯೊವನ್ನು ಯಾವುದೇ ಮಾಧ್ಯಮ ಸಿಬ್ಬಂದಿ ಮಾಡಿಲ್ಲ, ಬದಲಾಗಿ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರ ಸಾಮಾಜಿಕ ಮಾಧ್ಯಮ ತಂಡವೇ ಮಾಡಿದ್ದಾರೆ ಎಂದು ಗೋವಾ ರಾಜ್ಯ ಪತ್ರಕರ್ತರ ಸಂಘಟನೆಯ ಅಧ್ಯಕ್ಷ ರಾಜತಿಲಕ್ ನಾಯ್ಕ ಸ್ಪಷ್ಟಪಡಿಸಿದರು.

ಹಿನ್ನೆಲೆ:
ಕಳೆದ ಎರಡು ದಿನಗಳ ಹಿಂದೆ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ಬಾಂಬೋಲಿಯಲ್ಲಿರುವ ಗೋಮೆಕೊಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ, ವೈದ್ಯರೊಬ್ಬರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿದರು ಮತ್ತು ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಆದೇಶ ಹೊರಡಿಸಿದರು.ಚಿಕಿತ್ಸೆಗಾಗಿ ಗೋಮೆಕೊಗೆ ಬಂದಿದ್ದ ರೋಗಿಯೊಂದಿಗೆ ಸದರಿ ವೈದ್ಯರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಗ್ಯ ಸಚಿವರಿಗೆ ದೂರು ಬಂದಿತ್ತು ಎಂದು ಸಚಿವರು ಕಾರಣ ನೀಡಿದ್ದರು.
ಆದರೆ ಸಚಿವರು ಕೈಗೊಂಡ ಈ ಕ್ರಮದ ಕುರಿತಂತೆ ವೈದ್ಯಕೀಯ ಸಿಬ್ಬಂಧಿ ಆಕ್ರೋಷ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರ ಮಧ್ಯಸ್ಥಿಕೆಯ ನಂತರ ಪರಿಸ್ಥಿತಿ ತಿಳಿಗೊಂಡಿತ್ತು. ಆದರೆ ಈ ಘಟನೆಯ ನಂತರ ಗೋವಾದ ಬಿಚೋಲಿಮ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಾಧ್ಯಮ ವ್ಯಕ್ತಿಗಳಿಗೆ ಪ್ರವೇಶವಿಲ್ಲ ಎಂದು ಫಲಕ ಹಾಕಲಾಗಿರುವುದು ರಾಜ್ಯ ಪತ್ರಕರ್ತರ ಸಂಘಟನೆಯಿಂದ ನಿಷೇಧ ವ್ಯಕ್ತವಾಗಿತ್ತು. ಇದೀಗ ಈ ನಾಮಫಲಕ ತೆಗೆದುಹಾಕಲಾಗಿದೆ.