ಸುದ್ದಿಕನ್ನಡ ವಾರ್ತೆ
Goa : ಪತ್ರದೇವಿ ದಾಟಿದ ನಂತರ ಗೋವಾದಿಂದ ಬರುವ ಸಂಚಾರವನ್ನು ಕಡಿಮೆ ಮಾಡಲು ಗೋವಾ-ಬೆಂಗಳೂರು ರಿಂಗ್ ರಸ್ತೆಯನ್ನು 12,000 ರಿಂದ 15,000 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸುವ ಯೋಜನೆ ಇದೆ. ಈ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಈ ಹೆದ್ದಾರಿ ಪೂರ್ಣಗೊಂಡರೆ, ಗೋವಾದಲ್ಲಿನ ಸಂಚಾರ ದಟ್ಟಣೆ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನುಡಿದರು.

ಗೋವಾದ ಕುಠ್ಠಾಳಿಯ ಹೊಸ ಜುವಾರಿ ಸೇತುವೆಯ ಮೇಲೆ ವೀಕ್ಷಣಾ ಗೋಪುರಗಳು ಮತ್ತು ವೀಕ್ಷಣಾ ಗ್ಯಾಲರಿ ಯೋಜನೆಗಳ ಶಂಕುಸ್ಥಾಪನೆ ಸಮಾರಂಭದಲ್ಲಿ ಸಚಿವ ಗಡ್ಕರಿ ಮಾತನಾಡುತ್ತಿದ್ದರು. ಶುಕ್ರವಾರ ಸಂಜೆ ಚಿಕಲಿ ಪಂಚಾಯತ್ ಸಭಾಂಗಣದಲಿಕೀ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ ಸಾವಂತ್, ಕೇಂದ್ರ ರಾಜ್ಯ ಸಚಿವ ಶ್ರೀಪಾದ ನಾಯ್ಕ, ರಾಜ್ಯಸಭಾ ಸದಸ್ಯ ಸದಾನಂದ ಶೇಟ್ ತಾನಾವಡೆ, ಸ್ಪೀಕರ್ ರಮೇಶ ತವಡ್ಕರ್, ಪಂಚಾಯತ್ ಸಚಿವ ಮಾವಿನ್ ಗುದಿನೊ, ಸಚಿವ ಸುದಿನ್ ಧವಳೀಕರ್, ಸಚಿವ ಸುಭಾಷ್ ಪಳದೇಸಾಯಿ, ಶಾಸಕ ದಾಜಿ ಸಾಲ್ಕರ್, ದಿಗಂಬರ ಕಾಮತ್, ಶಾಸಕ ಆಂಟೋನಿಯೋ ವಾಜ್, ಪುರಸಭೆ ಅಧ್ಯಕ್ಷ ವಿರೇಶ ಬೋರಕರ್, ಉಪಸ್ಥಿತರಿದ್ದರು.

ಮುಂಬೈ-ಗೋವಾ ಹೆದ್ದಾರಿಯ ಕೆಲಸದಲ್ಲಿ ಹಲವು ತೊಂದರೆಗಳಿವೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದರು. ಅವು ಬಗೆಹರಿದ ನಂತರ, ಮೂರ್ನಾಲ್ಕು ತಿಂಗಳಲ್ಲಿ ಇಡೀ ಹೆದ್ದಾರಿ ಸಂಚಾರಕ್ಕೆ ಮುಕ್ತವಾಗಲಿದೆ. ಇದರಿಂದ ಗೋವಾದಿಂದ ಮುಂಬೈಗೆ 5 ರಿಂದ 6 ಗಂಟೆಗಳಲ್ಲಿ ತಲುಪಲು ಸಾಧ್ಯವಾಗುತ್ತದೆ ಎಂದರು.

ಗೋವಾದಲ್ಲಿ ಹೆದ್ದಾರಿಗಳ ಅಭಿವೃದ್ಧಿ ಪೂರ್ಣಗೊಳ್ಳುವ ಹಂತದಲ್ಲಿದೆ. ರಸ್ತೆಗಳ ಅಗಲೀಕರಣ ಮತ್ತು ಗುಣಮಟ್ಟದ ಕೆಲಸವು ಸಮಯ ಮತ್ತು ಇಂಧನವನ್ನು ಉಳಿಸುತ್ತಿದೆ.ಹೊಸ ಜುವಾರಿ ಸೇತುವೆಯಲ್ಲಿರುವ ವೀಕ್ಷಣಾ ಗೋಪುರಗಳು ಮತ್ತು ವೀಕ್ಷಣಾ ಗ್ಯಾಲರಿಗಳು ನನ್ನ ‘ಕನಸಿನ ಯೋಜನೆ’. ಈ ಯೋಜನೆಗೆ ಗೋವಾ ಸರ್ಕಾರ ಒಂದೇ ಒಂದು ಪೈಸೆ ಖರ್ಚು ಮಾಡಬೇಕಾಗಿಲ್ಲ; ಆದರೆ, ಜಿಎಸ್‍ಟಿಯಿಂದ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಯೋಜನೆ ಪೂರ್ಣಗೊಂಡ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಮಾಲಿನ್ಯವನ್ನು ಕಡಿಮೆ ಮಾಡಲು ವಿದ್ಯುತ್ ಚಾಲಿತ ವಾಹನಗಳ ಬಳಕೆ ಮತ್ತು ಎಥೆನಾಲ್ ಬಳಕೆ ಅಗತ್ಯ. ಪರಿಸರವನ್ನು ಪರಿಗಣಿಸಿ ಹೆಚ್ಚು ಮರಗಳನ್ನು ನೆಡಿ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕರೆ ನೀಡಿದರು.

 

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಮಾತನಾಡಿ-ಸಚಿವ ನಿತಿನ್ ಗಡ್ಕರಿ ಅವರ ಸಹಾಯ ಮತ್ತು ಸಹಕಾರವನ್ನು ಗೋಮಾಂತಕಿಯರು ಮರೆಯುವುದಿಲ್ಲ ಎಂದು ಕೇಂದ್ರ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಹೇಳಿದರು. ಸಚಿವ ಗಡ್ಕರಿ ಗೋವಾ ಅಭಿವೃದ್ಧಿಗೆ ಅಗತ್ಯವಾದದ್ದನ್ನು ನೀಡಿದ್ದಾರೆ. ಈ ಯೋಜನೆಯಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆ. ಕೆಲವು ಜನರಿಗೆ ಗೋವಾದ ಅಭಿವೃದ್ಧಿ ಕಾಣುತ್ತಿಲ್ಲ. ಅವರ ಬಗ್ಗೆ ಜಾಗರೂಕರಾಗಿರುವುದು ಅಗತ್ಯ ಎಂದು ಸಚಿವ ಶ್ರೀಪಾದ ನಾಯಕ್ ಹೇಳಿದರು.