ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ, ಅಂತೆಯೇ ಗೋವಾಕ್ಕೆ ಕೆಲಸಕ್ಕೆ ಬಂದು ಹೋಗುವ ಕಾರ್ಮಿಕರ ಸಂಖ್ಯೆ ಕೂಡ ಇದಕ್ಕಿಂದ ಹೆಚ್ಚಾಗಿದೆ. ಗೋವಾದಲ್ಲಿ ಕೆಲಸ ನಿರ್ವಹಿಸುವ ವೇಳೆ ಈ ಕಾರ್ಮಿಕರು ಗಂಭೀರ ಗಾಯಗೊಂಡರೆ ಕರ್ನಾಟಕದ ಕಾರ್ಮಿಕರಿಗೆ ಗೋವಾದ ಪ್ರಸಿದ್ಧ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ  ( Goa Medical Collage Hospital, Bambolim) ಉಚಿತ ವೈದ್ಯಕೀಯ ಸೌಲಭ್ಯವಿಲ್ಲದಿರುವುದು ಖೇದಕರ ಸಂಗತಿಯಾಗಿದೆ. ಕರ್ನಾಟಕ ಸರ್ಕಾರವು ಈ ಕುರಿತು ಗಮನ ಹರಿಸದಿರುವದು ಗೋವಾದಲ್ಲಿ ಸೂಕ್ತ ಚಿಕಿತ್ಸೆ ಲಭಿಸದೆಯೇ ಕಾರ್ಮಿಕರು ತೊಂದರೆ ಅನುಭವಿಸುವಂತಾಗುತ್ತಿದೆ.

ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕಳೆದ ಸುಮಾರು 5 ವರ್ಷಗಳ ಹಿಂದಷ್ಟೇ ಹೊರ ರಾಜ್ಯದ ರೋಗಿಗಳಿಗೆ ಗೋವಾ ಸರ್ಕಾರ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದನ್ನು ಬಂದ್ ಮಾಡಿ ಶೇ 25 ರಷ್ಟು ಶುಲ್ಕ ವಸೂಲಿ ಮಾಡುತ್ತಿದೆ. ಇದರಿಂದಾಗಿ ಗೋವಾಕ್ಕೆ ಬಂದು ಜೀವನೋಪಾಯಕ್ಕಾಗಿ ದುಡಿಯುತ್ತಿರುವ ಕೂಲಿ ಕಾರ್ಮಿಕರು ಅನಾರೋಗ್ಯ ಅಥವಾ ಅಪಘಾತದ ಸಂದರ್ಭದಲ್ಲಿ ಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯಿಂದ ವಂಚಿತರಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಗೆ ತೆರಳಲು ಇವರ ಬಳಿ ಹಣವಿಲ್ಲದ ಕಾರಣ ಚಿಕಿತ್ಸೆ ಲಭಿಸದೆಯೇ ತೊಂದರೆ ಅನುಭವಿಸಿದ ಅದೆಷ್ಟೋ ಉದಾಹರಣೆಗಳಿವೆ.

ಗೋವಾ ಜಿಎಂಸಿ (GMC)ಯಲ್ಲಿ ಯಾರಿಗೆ ಉಚಿತ ಚಿಕಿತ್ಸೆ…?
ಗೋವಾ ರಾಜ್ಯ ಸರ್ಕಾರವು ಕಳೆದ 5 ವರ್ಷಗಳ ಹಿಂದೆ ತಂದ ಬದಲಾವಣೆ ಆದೇಶದ ಪ್ರಕಾರ ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲಿಂನಲ್ಲಿ ಗೋವಾ ರಾಜ್ಯದ ಸ್ಥಳೀಯರಿಗೆ ಉಚಿತ ಚಿಕಿತ್ಸೆ ಲಭಿಸಲಿದೆ. ಇಷ್ಟೇ ಅಲ್ಲದೆಯೇ ಕರ್ನಾಟಕದಿಂದ ಗೋವಾದಲ್ಲಿ ನೆಲೆಸಿ ಗೋವಾದ ಸ್ಥಳೀಯ ನಿವಾಸಿ ಸೂಕ್ತ ದಾಖಲಾತಿ ಹೊಂದಿದ ಕನ್ನಡಿಗರಿಗೂ ಇಲ್ಲಿ ಉಚಿತ ಚಿಕಿತ್ಸೆ ಲಭಿಸಲಿದೆ. ಆದರೆ ಕರ್ನಾಟಕದಿಂದ ಗೋವಾಕ್ಕೆ ಬಂದು ಹೋಗುವ ವಲಸೆ ಕಾರ್ಮಿಕರ ಬಳಿ ಸ್ಥಳೀಯ ದಾಖಲಾತಿ ಇಲ್ಲದ ಕಾರಣ ಇವರಿಗೆ ಇಲ್ಲಿ ಏನೇ ಅನಾರೋಗ್ಯ ಸಮಸ್ಯೆಯಾದರೂ ಕೂಡ ಹಣ ಖರ್ಚು ಮಾಡಿಯೇ ಚಿಕಿತ್ಸೆ ಪಡೆದುಯಕೊಳ್ಳುವ ಅನಿವಾರ್ಯತೆಯಿದೆ.

                            ಮಹಾರಾಷ್ಟ್ರದ ಜನರಿಗೆ ಮಾತ್ರ ಏಕೆ ಉಚಿತ ಚಿಕಿತ್ಸೆ..?
ಈ ಸಮಸ್ಯೆಯನ್ನು ಮನಗಂಡು ಮಹಾರಾಷ್ಟ್ರ ಸರ್ಕಾರವು ಮಾತ್ರ ಗೋವಾದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ತನ್ನ ರಾಜ್ಯದ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಲಭಿಸುವಂತಾಗಬೇಕು ಎಂಬ ಉದ್ದೇಶದಿಂದ ಆರೋಗ್ಯ ವಿಮೆಯ ಮೂಲಕ ಗೋವಾ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದಾಗಿ ಮಹಾರಾಷ್ಟ್ರದಿಂದ ಗೋವಾಕ್ಕೆ ಬಂದ ವಲಸೆ ಕಾರ್ಮಿಕರಿಗೆ ಕೂಡ ಗೋವಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭಿಸುತ್ತಿದೆ. ಆದರೆ ಕರ್ನಾಟಕ ಸರ್ಕಾರ ಮಾತ್ರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆಯೇ ಗೋವಾಕ್ಕೆ ಬಂದು ಹೋಗುವ ವಲಸೆ ಕಾರ್ಮಿಕರನ್ನು ಅಲಕ್ಷಿಸಿದಂತೆ ಕಂಡುಬರುತ್ತಿದೆ.

  ಗೋವಾಕ್ಕೆ ಪ್ರವಾಸಕ್ಕೆ ಬಂದಾಗ ಅಪಘಾತ ಸಂಭವಿಸಿದರೂ ಇಲ್ಲ ಉಚಿತ ಚಿಕಿತ್ಸೆ….?
ಗೋವಾ ರಾಜ್ಯವು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇದರಿಂದಾಗ ಕರ್ನಾಟಕದಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಗೋವಾಕ್ಕೆ ಆಗಮಿಸುತ್ತಾರೆ. ಆದರೆ ಗೋವಾಕ್ಕೆ ಬಂದ ಸಂದರ್ಭದಲ್ಲಿ ಕರ್ನಾಟಕದ ಪ್ರವಾಸಿಗರಿಗೆ ಅಪಘಾತವಾದರೆ ಇಲ್ಲಿ ಉಚಿತ ಚಿಕಿತ್ಸೆ ಲಭಿಸುವುದಿಲ್ಲ. ಇಂತಹ ಹಲವು ಘಟನೆಗಳು ಮರುಕಳಿಸುತ್ತಿರುವುದನ್ನು ಕೂಡ ನಾವು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.

 ಉತ್ತರಕನ್ನಡ ಭಾಗದ ಜನತೆಗೂ ಹೆಚ್ಚಿನ ತೊಂದರೆ…!
ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲಿಂ ಗೆ ಈ ಮೊದಲು ಉತ್ತರ ಕನ್ನಡ ಭಾಗದಿಂದ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳು ಗೋವಾದ ಇದೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಉತ್ತರ ಕನ್ನಡ ಜಿಲ್ಲಿಯಲ್ಲಿ ಅತ್ಯಾಧುನಿಕ ಸುಸಜ್ಜಿತ ಆಸ್ಪತ್ರೆ ಇಲ್ಲದ ಕಾರಣ ಅಲ್ಲಿನ ರೋಗಿಗಳಿಗೆ ಗೋವಾದ ಆಸ್ಪತ್ರೆಗೆ ಬರವುದು ಅನಿವಾರ್ಯವಾಗಿದೆ. ಆದರೆ ಇದೀಗ ಈ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಲಭಿಸದ ಕಾರಣ ಅಲ್ಲಿನ ಜನತೆ ಕೂಡ ತೊಂದರೆ ಅನುಭವಿಸುವಂತಾಗಿದೆ. ಕರ್ನಾಟಕ ಸರ್ಕರ ಯಾವುದಾದರೂ ಒಂದು ಆರೋಗ್ಯ ವಿಮೆಯ ಮೂಲಕ ವ್ಯವಸ್ಥೆ ಕಲ್ಪಿಸಿದರೆ ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ವಿವಿಧ ಭಾಗದ ಕನ್ನಡಿಗರಿಗೂ ಗೋವಾ ಬಾಂಬೋಲಿಂ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಲಭಿಸುವಂತಾಗಲಿದೆ.

 ಗೋವಾ ಸರ್ಕಾರದೊಂದಿಗೆ ಕರಾರು ಮಾಡಿಕೊಳ್ಳಲಿ…
ಕರ್ನಾಟಕ ಸರ್ಕಾರವು ಗೋವಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಅಗತ್ಯ ಕರಾರು ಮಾಡಿಕೊಂಡು ಆರೋಗ್ಯ ವಿಮೆಯ ಮೂಲಕ ಗೋವಾದಲ್ಲಿ ವಲಸೆ ಕಾರ್ಮಿಕರಿಗೆ ದೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲಿಂನಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ಲಭಿಸುವಂತೆ ಮಾಡಬೇಕಿದೆ. ಇಲ್ಲವಾದಲ್ಲಿ ತುರ್ತು ಅನಾರೋಗ್ಯ ಅಥವಾ ಅಪಘಾತದ ಸಂದರ್ಭದಲ್ಲಿ ಗೋವಾಕ್ಕೆ ಬಂದ ವಲಸೆ ಕಾರ್ಮಿಕರು ಮತ್ತು ಪ್ರವಾಸಿಗರು ಹೆಚ್ಚಿನ ತೊಂದರೆ ಎದುರಿಸುವುದು ಇದೇ ರೀತಿ ಮುಂದುವರೆಯಲಿದೆ.