ಸುದ್ದಿಕನ್ನಡ ವಾರ್ತೆ
Goa : ಬಿಜೆಪಿ ಗೋವಾ ರಾಜ್ಯಾಧ್ಯಕ್ಷ ದಾಮು ನಾಯ್ಕ ರವರು ಕಳೆದ ಎರಡು ದಿನಗಳ ಹಿಂದಷ್ಟೇ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ರವರನ್ನು ಭೇಟಿ ಮಾಡಿದ್ದರು. ಸಚಿವ ಸಂಪುಟ ಪುನರ್ರಚನೆ ಕುರಿತು ಚರ್ಚೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. ಸಚಿವ ವಿಶ್ವಜಿತ್ ರಾಣೆ ಕೂಡ ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಮತ್ತು ಬಿ.ಎಲ್.ಸಂತೋಷ ರವರನ್ನು ಭೇಟಿ ಮಾಡಿದ್ದಾರೆ. ಇದು ಗೋವಾ ರಾಜ್ಯ ಸಚಿವ ಸಂಪುಟ ಪುನರ್ರಚನೆಯ ಕುರಿತು ಚರ್ಚೆಯನ್ನು ಹುಟ್ಟುಹಾಕಿದೆ.
ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ದಾಮು ನಾಯ್ಕ ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿದ್ದಾರೆ. ಬುಧವಾರ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಬಿ.ಎಲ್.ಸಂತೋಷ ರವರು ಗೋವಾದಲ್ಲಿನ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಕೂಡ ದೆಹಲಿಗೆ ತೆರಳಿದ್ದಾರೆ. ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ರವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.
ಸಚಿವ ಸಂಪುಟದಿಂದ ಕೆಲ ಸಚಿವರನ್ನು ಕೈ ಬಿಡುವ ಸಾಧ್ಯತೆ..?
ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ- ಮುಂದಿನ ತಿಂಗಳು ನಾಲ್ವರು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದ್ದು, ಎಲ್ಲಾ ಸಚಿವರ ಖಾತೆ ಬದಲಾವಣೆ ಮಾಡುವ ಸಾಧ್ಯತೆಯಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಗೋವಾದ ಇನ್ನೂ ಕೆಲ ಸಚಿವರು ಮತ್ತು ಶಾಸಕರನ್ನು ದೆಹಲಿಗೆ ಕರೆಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಗೋವಾದ ಸಚಿವ ಸಂಪುಟದಲ್ಲಿ ಬದವಾವಣೆ ಆಗಲಿದೆ ಎಂಬ ಮಾತು ಕಳೆದ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಕಳೆದ ಹದಿನೈದು ದಿನಗಳ ಹಿಂದೆ ಗೋವಾಕ್ಕೆ ಆಗಮಿಸಿದ್ದರು. ಅಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ದಾಮು ನಾಯ್ಕ, ಮತ್ತು ಇತರ ಕೆಲ ಶಾಸಕರಿಂದ ಗೋವಾದ ರಾಜಕೀಯ ಪರಿಸ್ಥಿತಿಗಳ ಮಾಹಿತಿ ಪಡೆದುಕೊಂಡಿದ್ದರು.
ದೆಹಲಿಯಿಂದ ಇಬ್ಬರೂ ನಾಯಕರಿಗೆ ಆಹ್ವಾನ..?
ಗೋವಾ ಸಚಿವ ಸಂಪುಟ ಬದವಾವಣೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಗೋವಾ ಸಚಿವ ಸಂಪುಟ ಪುನರ್ರಚನೆ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಆಸಕ್ತಿ ವಹಿಸಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಮುಂದಿನ ವಾರ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮತ್ತು ಸಚಿವ ವಿಶ್ವಜಿತ್ ರಾಣೆ ರವರನ್ನು ಕರೆಸುವ ಸಾಧ್ಯತೆಯಿದೆ ಎನ್ನಲಾಗಿದೆ. ಕೇಂದ್ರ ನಾಯಕತ್ವ ಒಟ್ಟಾಗಿ ಕುಳಿತು ಚರ್ಚಿಸಿ ಸಚಿವ ಸಂಪುಟ ಪುನರ್ರಚನೆ ಕುರಿತು ನಿರ್ಧರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.