ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಮೇಲೆ ಗೋವಾ ಟ್ರಾಫಿಕ್ ಪೋಲಿಸರು ಕಿರುಕುಳ ನೀಡಿ ಹಣ ವಸೂಲಿ ಮಾಡುತ್ತಿದ್ದಾರೆಯೇ..?… ಹೌದು ಹಾಗಂದು ಗೋವಾ ರಾಜ್ಯ ಆಡಳಿತ ಪಕ್ಷ ಬಿಜೆಪಿಯ ಮೂವರು ಶಾಸಕರೇ ರಾಜ್ಯ ಪೋಲಿಸ್ ಮಹಾ ನಿರ್ದೇಶಕರ ಬಳಿ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಜಗತ್ಪ್ರಸಿದ್ದ ಪ್ರವಾಸಿ ತಾಣ ಗೋವಾದಲ್ಲಿ ಪ್ರವಾಸಿಗರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆಯೇ…? ಎಂಬ ಪ್ರಶ್ನೆ ಎದುರಾಗಿದೆ.

ಉತ್ತರ ಗೋವಾದ ಕರಾವಳಿ ಪ್ರದೇಶದ ಕಲಂಗುಟ್ ಶಾಸಕ ಮೈಕಲ್ ಲೋಬೋ, ಶಿವೋಲಿ ಶಾಸಕ ದಿಲಯ್ಲಾ ಲೋಬೋ ಮತ್ತು ಸಾಳಗಾಂವ್ ಶಾಸಕ ಕೇದಾರ್ ನಾಯ್ಕ್ ಅವರು ಪೊಲೀಸ್ ಪ್ರಧಾನ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಅವರನ್ನು ಭೇಟಿ ಮಾಡಿ ಟ್ರಾಫಿಕ್ ಪೋಲಿಸರು ಪ್ರವಾಸಿಗರ ಮೇಲೆ ಕಿರುಕುಳವನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಟ್ರಾಫಿಕ್ ಪೊಲೀಸರು ಪ್ರವಾಸಿಗರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು; ಆದರೆ ಪ್ರವಾಸಿಗರಿಗೆ ಅನಗತ್ಯ ಕಿರುಕುಳ ನೀಡಬಾರದು ಎಂದು ಬಿಜೆಪಿಯ ಮೂವರು ಶಾಸಕರು ಮಹಾನಿರ್ದೇಶಕರಿಗೆ ಹೇಳಿಕೆ ನೀಡಿದ್ದಾರೆ.

ರಾಜ್ಯಕ್ಕೆ ಬರುವ ಪ್ರವಾಸಿಗರಿಗೆ ಸಂಚಾರಿ ಪೊಲೀಸರಿಂದ ತೊಂದರೆಯಾಗುತ್ತಿದೆ. ಪ್ರವಾಸಿಗರಿಗೆ ಆಗುತ್ತಿರುವ ಕಿರುಕುಳವನ್ನು ಕೂಡಲೇ ನಿಲ್ಲಿಸುವಂತೆ ಪೋಲಿಸ್ ಮಹಾನಿರ್ದೇಶಕರ ಬಳಿ ಮನವಿ ಮಾಡಲಾಗಿದೆ. ಪ್ರವಾಸಿಗರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಕಂಡುಬಂದರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು; ಆದರೆ ಸಾಮಾನ್ಯ ಪ್ರವಾಸಿಗರನ್ನು ತಪಾಸಣೆ ಹೆಸರಿನಲ್ಲಿ ನಿಲ್ಲಿಸಿ ಕಿರುಕುಳ ನೀಡಬಾರದು. ಗೋವಾದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಟ್ರಾಫಿಕ್ ಪೊಲೀಸರು ಕಿರುಕುಳ ನೀಡಿದರೆ ಪ್ರವಾಸಿಗರು ಗೋವಾದಿಂದ ದೂರ ಸರಿಯುತ್ತಾರೆ ಎಂದು ಮೈಕಲ್ ಲೋಬೋ ಹೇಳಿದ್ದಾರೆ.
ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳಿಗೆ ಮಾತ್ರ ವಾಹನಗಳನ್ನು ಓಡಿಸಲು ಲೈಸನ್ಸ ನೀಡಬೇಕು. ಗ್ರಾಮದ ಕೆಲ ಯುವಕರು ಚಾಲನಾ ಪರವಾನಗಿ ಹಾಗೂ ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಲೋಬೋ ಹೇಳಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಅಪಘಾತ ಪೀಡಿತ ಸ್ಥಳಗಳನ್ನು ಪತ್ತೆ ಹಚ್ಚಿ ಅಗತ್ಯ ಸೂಚನಾ ಫಲಕಗಳನ್ನು ಹಾಕಿ ಸ್ಪೀಡ್ ಬ್ರೇಕರ್ ಅಳವಡಿಸುವಂತೆ ಮೈಕಲ್ ಲೋಬೊ ಮನವಿ ಮಾಡಿದ್ದಾರೆ.

ಉತ್ತರ ಗೋವಾದ ಕಲಂಗುಟ್‍ನಿಂದ ಬಾಗಾವರೆಗಿನ ಕರಾವಳಿ ಪ್ರದೇಶದಲ್ಲಿ ಪೊಲೀಸರು ಆರು ಸ್ಥಳಗಳಲ್ಲಿ ಪ್ರವಾಸಿಗರನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ. ಅಲ್ಲದೆ, ಪ್ರವಾಸಿಗರು ಹಳೆ ಗೋವಾದಿಂದ ಮಂಗೇಶಿಗೆ ಹೋದರೆ, ಅವರನ್ನು 9 ಸ್ಥಳಗಳಲ್ಲಿ ನಿಲ್ಲಿಸಲಾಗುತ್ತದೆ. ಪ್ರವಾಸಿಗರಿಗೆ ಒಂದು ದಿನದಲ್ಲಿ ಒಮ್ಮೆ ಚಲನ್ ನೀಡಿದರೆ ಅದೇ ದಿನ ಮತ್ತೆ ಚಲನ್ ನೀಡಬಾರದು ಎಂದು ಮೈಕಲ್ ಲೋಬೋ ಹೇಳಿದ್ದಾರೆ.