ಸುದ್ದಿಕನ್ನಡ ವಾರ್ತೆ
Goa : ಭೂ ಹಗರಣದಲ್ಲಿ ತಲೆಮರೆಸಿಕೊಂಡಿರುವ ಶಂಕಿತ ಸಿದ್ದಿಕಿ ಅಲಿಯಾಸ್ ಸುಲೇಮಾನ್ ಖಾನ್ ಈತನನ್ನು ಬಂಧಿಸಲು ಸಹಾಯ ಮಾಡಬೇಕೆಂದು ಕೋರಿ ಗೋವಾ ಕಾಂಗ್ರೆಸ್ ಕರ್ನಾಟಕದ ಸಚಿವರಿಗೆ ಪತ್ರ ಕಳುಹಿಸಿತ್ತು. ಆದರೆ, ಕಾಂಗ್ರೆಸ್ ಪಕ್ಷವು ಮಹದಾಯಿ ವಿಷಯದ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಪತ್ರವನ್ನು ಏಕೆ ಕಳುಹಿಸುತ್ತಿಲ್ಲ? ಎಂದು ಆಜಿಪಿ ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕ್ರಾಂತಿಕಾರಿ ಗೋವನ್ಸ್ ಪಾರ್ಟಿ (ಆರ್‍ಜಿಪಿ) ಮುಖ್ಯಸ್ಥ ಮನೋಜ್ ಪರಬ್ ಈ ಪ್ರಶ್ನಿಸಿದ್ದಾರೆ.

 

ರಾಷ್ಟ್ರೀಯ ಪಕ್ಷಗಳು ಗೋವಾದ ಜನರನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸುತ್ತಿವೆ. ಈ ಪಕ್ಷಗಳಿಗೆ ಮತ ಹಾಕುವುದು ಗೋವಾದ ಅಳಿವಿಗೆ ಮತ ಹಾಕಿದಂತೆ ಎಂದು ಮನೋಜ್ ಪರಬ್ ಆರೋಪಿಸಿದ್ದಾರೆ. ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವಿನ ಮೈತ್ರಿ ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ. ಅಲ್ಲದೆ, ಆರ್‍ಜಿಪಿಯನ್ನು ಬಿಜೆಪಿಯ ಬಿ ಟೀಮ್ ಎಂದು ಕರೆದ ನಾಯಕರು ಈಗ ಎಲ್ಲಿದ್ದಾರೆ? ಎಂದು ಮನೋಜ್ ಪರಬ್ ಪ್ರಶ್ನಿಸಿದ್ದಾರೆ.

 

ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಸಂಬಂಧಿಸಿದಂತೆ ಆರ್‍ಜಿಪಿ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಿದೆ. ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಗೊಂಡಿದ್ದು, ಪಕ್ಷದ ಸದಸ್ಯತ್ವ ನೋಂದಣಿಯನ್ನು ಪರಿಶೀಲಿಸಿದ ನಂತರ ಜಿಲ್ಲಾ ಪಂಚಾಯತ್ ಚುನಾವಣೆಯ ಬಗ್ಗೆ ನಿರ್ಧಾರ ಪ್ರಕಟಿಸಲಾಗುವುದು ಎಂದು ಮನೋಜ್ ಪರಬ್ ಹೇಳಿದ್ದಾರೆ.

 

ಆರ್‍ಜಿಪಿಯ ಭೂ ರಕ್ಷಣೆ ಮತ್ತು ಸಂರಕ್ಷಣಾ ಮಸೂದೆಯನ್ನು ಯಾವುದೇ ರಾಜಕೀಯ ಪಕ್ಷ ಬೆಂಬಲಿಸಲಿಲ್ಲ. ಆದ್ದರಿಂದ, ಗೋಮಾಂತಕೇತರರು ನಮ್ಮ ಭೂಮಿಯನ್ನು ಖರೀದಿಸುತ್ತಿದ್ದಾರೆ. ಗೋವಾದಲ್ಲಿ ಭೂಮಿಯನ್ನು ಹೇಗೆ ರಕ್ಷಿಸಬೇಕು ಎಂಬುದರ ಕುರಿತು ಪ್ರತಿಯೊಬ್ಬ ಶಾಸಕರು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗಿದೆ. ರಾಜ್ಯದ ಸಾಮಾನ್ಯ ನಾಗರಿಕರು ಭೂಮಿ ಖರೀದಿಸಲು ಸಾಧ್ಯವಿಲ್ಲ; ಏಕೆಂದರೆ ಬೆಲೆಗಳು ಕೈಗೆಟುಕುವುದಿಲ್ಲ  ಎಂದು ಈ ಸಂದರ್ಭದಲ್ಲಿ ಶಾಸಕ ವಿರೇಶ್ ಬೋರ್ಕರ್ ಹೇಳಿದರು.