ಸುದ್ದಿಕನ್ನಡ ವಾರ್ತೆ
Goa : ಗೋವಾದಲ್ಲಿ ಮಾವಿನ ಹಣ್ಣಿನ ಋತು ಈಗ ಪ್ರಾರಂಭವಾಗುತ್ತಿದೆ. ಗೋವಾದ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಹಾಪುಸ್ ಜೊತೆಗೆ, ಮಾನಕುರಾದ್, ತೋತಾಪುರಿ ಮಾವಿನಹಣ್ಣುಗಳು ಮತ್ತು ಕೈರಿ ಕೂಡ ಹೇರಳವಾಗಿ ಮಾರುಕಟ್ಟೆಗೆ ಬರಲಾರಂಭಿಸಿದೆ. ಮಾವಿನ ಹಣ್ಣುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿಲ್ಲವಾದರೂ, ಸಣ್ಣ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬಂದಿವೆ.
ಗೋವಾದ ಮಾರುಕಟ್ಟೆಗೆ ಇನ್ನೂ ಅಗತ್ಯ ಪ್ರಮಾಣದ ದೊಡ್ಡ ಮಾವಿನಹಣ್ಣುಗಳು ಬಂದಿಲ್ಲ. ಆದರೆ ಈ ವರ್ಷ ಮಾವಿನ ಸೀಸನ್ ಚೆನ್ನಾಗಿರುವುದರಿಂದ ಮುಂದಿನ ಹದಿನೈದು ದಿನಗಳಲ್ಲಿ ಹೆಚ್ಚಿನ ಪ್ರಮಾಣದ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರಬಹುದು. ಪ್ರಸ್ತುತ, ಗೋವಾದ ಮಡಗಾಂವನಲ್ಲಿ ಹಾಪುಸ್ ಮಾವು, ಪಯರಿ ಮಾವು, ಮಾನಕುರಾದ್ ಮತ್ತು ತೋತಾಪುರಿ ಮಾವು ಮಾರುಕಟ್ಟೆಗೆ ಬಂದಿವೆ.
ಮಾನಕುರಾದ್ ಮಾವಿನಹಣ್ಣು ಪ್ರತಿ ಹಣ್ಣಿಗೆ 450 ರೂ., ಪ್ರತಿ ಡಜನ್‍ಗೆ 5,500 ರೂ.ಗೆ ಮಾರಾಟವಾಗುತ್ತಿದೆ. ಸಣ್ಣ ಹಾಪುಸ್ ಮಾವಿನ ಹಣ್ಣುಗಳು ಬಂದಿದ್ದು, ಪ್ರತಿ ಹಣ್ಣಿಗೆ 100 ರೂ. ಮತ್ತು ಪ್ರತಿ ಡಜನ್‍ಗೆ 1,200 ರೂ.ಗೆ ಮಾರಾಟವಾಗುತ್ತಿವೆ ಎಂದು ಮಡಗಾಂವ ಮಾರುಕಟ್ಟೆಯಲ್ಲಿ ಮಾವಿನ ಹಣ್ಣು ಮಾರಾಟಗಾರ ನರೇಂದ್ರ ನಾಯಕ್ ಅವರು ಮಾಹಿತಿ ನೀಡಿದರು.
ಗೋವಾದಲ್ಲಿ ಪಯರಿ ಮಾವಿನ ಹಣ್ಣು ಡಜನ್‍ಗೆ 1,000 ರೂ.ಗೆ ಮತ್ತು ತೋತಾಪುರಿ ಮಾವಿನ ಹಣ್ಣು ಡಜನ್‍ಗೆ 600 ರಿಂದ 700 ರೂ.ಗೆ ಮಾರಾಟವಾಗುತ್ತಿದೆ. ಮುಂದಿನ ಹದಿನೈದು ದಿನಗಳಲ್ಲಿ ಮಾವಿನ ಹಣ್ಣುಗಳ ಆಗಮನ ಹೆಚ್ಚಾಗಲಿದ್ದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮಾವು ಲಭ್ಯವಾಗಲಿದೆ ಎಂದು ನರೇಂದ್ರ ನಾಯಕ್ ಆಶಾವಾದ ವ್ಯಕ್ತಪಡಿಸಿದ್ದಾರೆ.