ಸುದ್ಧಿಕನ್ನಡ ವಾರ್ತೆ

ಪಣಜಿ: ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಶನಿವಾರ ನಡೆದ ಮಾಡರ್ನ್ ಪೆಂಟಾಥ್ಲಾನ್‍ನಲ್ಲಿ ಗೋವಾ ರಾಜ್ಯದ ಸ್ಫರ್ಧಳುಗಳು ನಾಲ್ಕು ಪದಕಗಳನ್ನು ಗೆದ್ದು ಸಾಧನೆಗೈದಿದ್ದಾರೆ. (3 silver and 1 bronze for Goa in 38th National Games).

ಕಳೆದ ಆವೃತ್ತಿಯಲ್ಲಿ ಚಿನ್ನದ ಪದಕ ವಿಜೇತ ಬಾಬು ಗಾಂವ್ಕರ್ ಮೂರು ಪದಕಗಳನ್ನು (3 ಬೆಳ್ಳಿ) ಗೆದ್ದರು. ಬಾಬು ಲೇಸರ್ ರನ್ ವೈಯಕ್ತಿಕ ಪುರುಷರ ವಿಭಾಗದಲ್ಲಿ ಬೆಳ್ಳಿ, ಲೇಸರ್ ರನ್ ಪುರುಷರ ತಂಡ ವಿಭಾಗದಲ್ಲಿ ಹರಿಚಂದ್ರ ವೆಳಿಪ್ ಮತ್ತು ಸೂರಜ್ ವೆಳಿಪ್ ಅವರೊಂದಿಗೆ ಬೆಳ್ಳಿ ಮತ್ತು ಲೇಸರ್ ರನ್ ಮಿಶ್ರ ರಿಲೇಯಲ್ಲಿ ನೇಹಾ ಗಾಂವ್ಕರ್ ಅವರೊಂದಿಗೆ ಮತ್ತೊಂದು ಬೆಳ್ಳಿ ಪದಕ ಗೆದ್ದರು. ಲೇಸರ್ ರನ್ ಮಹಿಳಾ ತಂಡ ವಿಭಾಗದಲ್ಲಿ ನೇಹಾ ಗಾಂವ್ಕರ್, ಅಂಕಿತಾ ವೆಲಿಪ್ ಮತ್ತು ವೈಷ್ಣವಿ ವದರ್ ಅವರೊಂದಿಗೆ ಅವರು ಕಂಚಿನ ಪದಕ ಗೆದ್ದರು. ಉತ್ತರಾಖಂಡ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗೋವಾ ಇದುವರೆಗೆ ಏಳು ಪದಕಗಳನ್ನು (2 ಚಿನ್ನ, 3 ಬೆಳ್ಳಿ ಮತ್ತು 2 ಕಂಚು) ಗೆದ್ದಿದೆ ಮತ್ತು ಗೋವಾ ರಾಜ್ಯವು ಪ್ರಸ್ತುತ ಪದಕ ಪಟ್ಟಿಯಲ್ಲಿ 24 ನೇ ಸ್ಥಾನದಲ್ಲಿದೆ.

 

ಗೋವಾ ಸ್ಕ್ವಾಷ್ ಮತ್ತು ಯೋಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿತ್ತು. ಮಹಿಳಾ ಸ್ಕ್ವಾಷ್ ನಲ್ಲಿ ಗೋವಾ ಪರ ಆಕಾಂಕ್ಷಾ ಸಾಳುಂಖೆ ಚಿನ್ನದ ಪದಕ ಗೆದ್ದುಕೊಟ್ಟರು, ಇದರಿಂದಾಗಿ ಗೋವಾಗೆ ಸ್ಪರ್ಧೆಯಲ್ಲಿ ಮೊದಲ ಪದಕ ದೊರೆಯಿತು. ಅವರು ಈ ಹಿಂದೆ 2023 ರಲ್ಲಿ ಗೋವಾದಲ್ಲಿ ನಡೆದ 37 ನೇ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. ಶುಭಂ ದೇಬ್ನಾಥ್ ಯೋಗ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಯೋಗ ಆಸನದಲ್ಲಿ ಚಿನ್ನದ ಪದಕ ಗೆದ್ದರು. ಮೂಲತಃ ಪಶ್ಚಿಮ ಬಂಗಾಳದವರಾದ ಶುಭಂ ಈಗ ಗೋವಾವನ್ನು ಪ್ರತಿನಿಧಿಸುತ್ತಿದ್ದಾರೆ. ಗುರುವಾರ, ಗೋವಾ ತಂಡವು ಬೀಚ್ ವಾಲಿಬಾಲ್ ಪಂದ್ಯಾವಳಿಯಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡಿತು. ತೆಲಂಗಾಣ ಜೋಡಿಯನ್ನು 2-1 ಅಂತರದಿಂದ ಸೋಲಿಸುವ ಮೂಲಕ ಗೋವಾ ಕಂಚಿನ ಪದಕ ಗೆದ್ದುಕೊಂಡಿತು.