ಸುದ್ಧಿಕನ್ನಡ ವಾರ್ತೆ
Goa : ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ವಿಮಾನ,ರೈಲು,ಬಸ್, ಕಾರುಗಳಲ್ಲಿ ಹೋಗುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ತಮ್ಮ ಹಳೇಯ ಬೈಕ್ ನಲ್ಲಿ ಕುಂಭ ಮೇಳ ಸುತ್ತಿ ಬಂದಿದ್ದಾರೆ. ಅವರೇ ಸದ್ಯ ಗೋವಾದ ಪಣಜಿಯಲ್ಲಿ ಉದ್ಯೋಗಿಯಾಗಿರುವ ಮಂಗಳೂರಿನ ಮಠದ ಕಣಿಯ ವಿವೇಕಾನಂದ ಶಣೈ.

2001 ರ ಮಾಡೆಲ್ ನ ಸುಜುಕಿ ಫಿಯರೊ ಬೈಕ್ ನಲ್ಲಿ ಪಣಜಿಯಿಂದ ಜನವರಿ 9 ರಂದು ಹೊರಟಿದ್ದ ಅವರು ಒಟ್ಟೂ 4,000 ಕಿ.ಇ ಗಳ ಪ್ರಯಾಣ, 11 ದಿನಗಳ ಪರ್ಯಟನೆ ಮುಗಿಸಿ ವಾಪಸ್ಸಾಗಿದ್ದಾರೆ. ಅಂದ ಹಾಗೆ 2001 ರಲ್ಲಿ ಇದೇ ಬೈಕ್ ಖರೀದಿಸುವಾಗಲೂ ಅವರು ಪ್ರಯಾಗರಾಜ್ ನ ಕುಂಭ ಮೇಳಕ್ಕೆ ಹೋಗಿ ಬಂದಿದ್ದರು.

ಪ್ರಸಕ್ತ ಜನವರಿ 9 ರಂದು ಪಣಜಿಯಿಂದ ಫಿಯೆರೊ ಬೈಕ್ ನಲ್ಲಿ ಏಕಾಂಗಿಯಾಗಿ ಹೊರಟ ಅವರು, ಹಲವು ಹೆದ್ದಾರಿಗಳನ್ನು ದಾಟುತ್ತಾ ಮಧ್ಯಪ್ರದೇಶದ ಪೆಂಚ್ ಟೈಗರ್ ರಿಸರ್ವ ಸಹಿತ ಕೆಲವು ವನ್ಯಜೀವಿ ಧಾಮಗಳ ಮೂಲಕ ಸಾಗಿ ಜನವರಿ 12 ರಂದು ಕುಂಭಮೇಳ ತಲುಪಿದ್ದಾರೆ. 13 ಮತ್ತು 14 ರಂದು ಅಲ್ಲೇ ಉಳಿದು ನಂತರ ಗೋವಾಕ್ಕೆ ವಾಪಸ್ಸಾಗಿ ಜನವರಿ 19 ಕ್ಕೆ ಪಣಜಿಗೆ ಬಂದು ತಲುಪಿದ್ದಾರೆ.

ಪಣಜಿಯಿಂದ ಪ್ರಯಾಗರಾಜ್ ಗೆ 30 ಗಂಟೆಗಳ ಪ್ರಯಾಣ. ಆದರೆ ಉತ್ತರ ಭಾರತದಲ್ಲಿ ಸಂಜೆ 6 ರಿಂದ ಬೆಳಿಗ್ಗೆ 8 ರ ವರೆಗೆ ಮಂಜು ಕವಿಯುವುದರಿಂದ ಎಚ್ಚರಿಕೆ ವಹಿಸಬೇಕು. ಹಗಲಿನ ಸಮಯವನ್ನೇ ಹೆಚ್ಚು ಬಳಸಿಕೊಳ್ಳಬೇಕಾಗುತ್ತದೆ. ಎರಡೂ ದಿನವೂ ಕುಂಭಮೇಳ ನೋಡಿದೆ. ಸ್ನಾನ ಮಾಡಿದೆ. ಎರಡನೇ ದಿನ ಮಕರ ಸಂಕ್ರಾಂತಿಯೂ ಆಗಿದ್ದರಿಂದ ವಿಶೇಷ ನಾಗಾ ಸಾಧುಗಳ ಶಾಹಿ ಸ್ನಾನದ ಬಳಿಕ ನಮಗೆ ಸ್ನಾನಕ್ಕೆ ಅನುವು ಮಾಡಿಕೊಟ್ಟರು ಎಂದು ವಿವೇಕಾನಂದ ಶಣೈ ಮಾಹಿತಿ ನೀಡಿದರು.

2001 ನೇಯ ಇಸ್ವಿಯ ಮಾಡೆಲ್ ಬೈಕನ್ನೇ ನನ್ನ ಜರ್ನಿಗೆ ಆರಿಸಿಕೊಂಡೆ. ನಾನು ಬೈಕ್ ಮೆಕಾನಿಕ್ ಆಗಿದ್ದರಿಂದ ನನಗೆ ಧೈರ್ಯವಿತ್ತು. ಪ್ರಯಾಣದಲ್ಲಿ ಒಮ್ಮೆ ಟೈರ್ ಪಂಚರ್ ಆಗಿದ್ದು ಬಿಟ್ಟರೆ ಯಾವುದೇ ಸಮಸ್ಯೆಯೂ ಆಗಿಲ್ಲ. ಮೇಲಾಗಿ ಬೈಕ್ ಪ್ರಯಾಣಕ್ಕಿಂತಲೂ ಆಧ್ಯಾತ್ಮಿಕ ಮನೋಭಾವದೊಂದಿಗೆ ಹಮ್ಮಿಕೊಂಡ ಪ್ರವಾಸ , ಹಾಗಾಗಿ ಯಾವುದೇ ಕಷ್ಟಗಳನ್ನೂ ಎದುರಿಸಿ ಹೋಗುವ ಛಲವಿತ್ತು. ಮಾರ್ಗ ಮಧ್ಯೆ ಪಂಡರಾಪುರ, ಕೊಲ್ಹಾಪುರ, ವಾರಣಾಸಿ ಅಯೋಧ್ಯೆ ದರ್ಶನವನ್ನೂ ಮಾಡಿ ಬಂದೆ ಎಂದು ವಿವೇಕಾನಂದ ಶಣೈ ಮಾಹಿತಿ ನೀಡಿದರು.