ಸುದ್ಧಿಕನ್ನಡ ವಾರ್ತೆ
Goa : ಗೋವಾದಲ್ಲಿ ಜನರ ಆಹಾರದ ಮುಖ್ಯ ಪದಾರ್ಥವಾಗಿರುವ ತೆಂಗಿನ ಕಾಯಿ ದರ ಗಗನಕ್ಕೇರಿದೆ. ಕಳೆದ ಕೆಲ ತಿಂಗಳಿಂದ ತೆಂಗಿನ ಕಾಯಿ ದರ 45 ರಿಂದ 50 ರೂ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಆಹಾರದಲ್ಲಿ ಮುಖ್ಯವಾಗಿ ತೆಂಗಿನ ಕಾಯಿ ಬಳಸುವವರು ಹೆಚ್ಚಿನ ಹಣ ತೆರುವ ಅನಿರ್ವಾತೆ ಎದುರಾಗಿದೆ.

ಈ ಹಿಂದೆ ಗೋವಾದಲ್ಲಿ 15 ರಿಂದ 20 ರೂ ಇದ್ದ ಸಣ್ಣ ಗಾತ್ರದ ತೆಂಗಿನ ಕಾಯಿ ಇದೀಗ 25 ರೂಗೆ ತಲುಪಿದೆ. 30 ರೂ ಇದ್ದ ಮಧ್ಯಮ ಗಾತ್ರದ ತೆಂಗಿನಕಾಯಿ ದರ ಸದ್ಯ 40 ರಿಂದ 45 ರೂ ಗೆ ತಲುಪಿದೆ. ದೊಡ್ಡ ಗಾತ್ರದ ತೆಂಗಿನ ಕಾಯಿ ಸರಾಸರಿ 50 ರಿಂದ 55 ರೂ ಗಳಿಗೆ ಮಾರಾಟ ಮಾಡಲಾಗುತ್ತಿದೆ.
ಬದಲಾದ ಹವಾಮಾನದಿಂದ ತೆಂಗಿನ ಕಾಯಿ ಬೆಳೆ ಇಳಿಕೆಯಾಗಿರುವುದೇ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದೇ ಹೇಳಲಾಗುತ್ತಿದೆ.

ಕರ್ನಾಟಕ, ಕೇರಳದಿಂದ ಕಡಿಮೆ ಪೂರೈಕೆ…?
ಗೋವಾ ರಾಜ್ಯಕ್ಕೆ ಬಹುಮುಖ್ಯವಾಗಿ ಕರ್ನಾಟಕ ಮತ್ತು ಕೇರಳದಿಂದ ತೆಂಗಿನಕಾಯಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಆದರೆ ಕಳೆದ ಕೆಲ ತಿಂಗಳಿಂದ ಆ ಭಾಗದಲ್ಲಿ ತೆಂಗಿನ ಕಾಯಿ ಬೆಳೆಯಲ್ಲಿ ಇಳಿಕೆಯಾಗಿರುವುದರಿಂದ ಗೋವಾಕ್ಕೆ ಪೂರೈಕೆ ಕಡಿಮೆಯಾಗಿದೆ ಎನ್ನಲಾಗಿದೆ. ಇದರಿಂದಾಗಿ ಗೋವಾದಲ್ಲಿ ತೆಂಗಿನ ಕಾಯಿ ದರ ಹೆಚ್ಚಳವಾಗಿದೆ ಎಂದು ತೆಂಗಿನ ಕಾಯಿ ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.