ಸುದ್ದಿಕನ್ನಡ ವಾರ್ತೆ
Goa : ಗೋವಾ ಕನ್ನಡ ಸಮಾಜ ಈ ನಮ್ಮ ಸಂಸ್ಥೆ ಕಳೆದ 40 ವರ್ಷಗಳಿಂದ ತನ್ನದೇ ಆದ ಅಸ್ಥಿತ್ವವನ್ನು ಉಳಿಸಿಕೊಂಡು ಸಾಮಾಜಿಕ ಕ್ಷೇತ್ರ, ಸಾಂಸ್ಕøತಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತ ಬಂದಿದೆ. ಪ್ರತಿ ವರ್ಷವೂ ಮಕರ ಸಂಕ್ರಾಂತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರಸಕ್ತ ಬಾರಿ ಗೋವಾ ಕನ್ನಡ ಸಮಾಜದ ಮಾಣಿಕ್ಯ ಮಹೋತ್ಸವ ವರ್ಷದ ಸಂದರ್ಭದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್ ನುಡಿದರು.
ಗೋವಾ ಕನ್ನಡ ಸಮಾಜದ ವತಿಯಿಂದ ಪಣಜಿಯ ಕಛೇರಿಯಲ್ಲಿ ಆಯೋಜಿಸಿದ್ದ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಗೋವಾ ಕನ್ನಡ ಸಮಾಜವನ್ನು ಈ ಹಿಂದಿನ ಅಧ್ಯಕ್ಷರು ಈ ಸಂಸ್ಥೆಯಲ್ಲಿ ಅಧ್ಯಕ್ಷತೆ ವಹಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸಕ್ತ ನನಗೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿದ್ದಾರೆ. ಎಲ್ಲರ ಸಹಕಾರದಿಂದ ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಕಲ್ಪವಿದೆ. ಮುಂಬರುವ ಎಲ್ಲ ಕಾರ್ಯಕ್ರಮಗಳಿಗೆ ನಮ್ಮ ಸಂಸ್ಥೆಯ ಪದಾಧಿಕಾರಿಗಳ ಹಾಗೂ ಕನ್ನಡಿಗರ ಸಹಕಾರ ಅಗತ್ಯ ಎಂದು ಅಧ್ಯಕ್ಷ ಅರುಣಕುಮಾರ್ ನುಡಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಪಣಜಿಯ ಕಸ್ತೂರಬಾ ಮಾತೋಶ್ರೀ ಹೈಸ್ಕೂಲ್ ನ ಕನ್ನಡ ಮುಖ್ಯ ಶಿಕ್ಷಕರಾದ ಮೋಹನದಾಸ್ ಬಿಎಂ ಮಾತನಾಡಿ- ಮಕರಸಂಕ್ರಾಂತಿಯು ಪ್ರತಿಯೊಬ್ಬರ ಬಾಳಲ್ಲಿ ಸುಖ ಶಾಂತಿ ಸಂತೋಷ ತರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷರಾದ ಶ್ರೀನಿವಾಸ್ ಪೈ, ಪ್ರಶಾಂತ ಜೈನ್, ಕಾರ್ಯದರ್ಶಿ ಶ್ರೀಕಾಂತ ಲೋಣಿ, ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಖಜಾಂಚಿ ಸಂದೇಶ ಗಾಡವಿ, ಕಾರ್ಯಕಾರಿ ಸಮೀತಿಯ ಸದಸ್ಯರಾದ ಶಾಮಸುದ್ದೀನ ಸೊಲ್ಲಾಪುರಿ, ಪ್ರಕಾಶ ಭಟ್, ಮಂಜುನಾಥ ದೊಡ್ಡಮನಿ, ಸಿ.ಜಿ.ಕಣ್ಣೂರ್, ಸುನೀಲ್ ಕುಮಠಳ್ಳಿ, ಚಿನ್ಮಯ ಎಂಸಿ ಮತ್ತಿತರರು ಉಪಸ್ಥಿತರಿದ್ದರು.
ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷ ಶ್ರೀನಿವಾಸ್ ಪೈ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಕಾರ್ಯಕ್ರಮದಲ್ಲಿ ಎಲ್ಲರೂ ಪರಸ್ಪರ ಎಳ್ಳುಬೆಲ್ಲ ಹಂಚಿ ಸಂಕ್ರಾಂತಿ ಹಬ್ಬದ ಶುಭ ಕೋರಿದರು. ಗೋವಾ ಕನ್ನಡ ಸಮಾಜದ ಕಾರ್ಯದರ್ಶಿ ಶ್ರೀಕಾಂತ ಲೋಣಿ ಕೊನೆಯಲ್ಲಿ ವಂದನಾರ್ಪಣೆಗೈದರು.