ಸುದ್ಧಿಕನ್ನಡ ವಾರ್ತೆ
Goa : ರೈಲ್ವೆ ಮೂಲಕವಾಗಿ ಹೊರ ರಾಜ್ಯದಿಂದ ಗೋವಾಕ್ಕೆ ಓಡಿಬರುವ ಅಪ್ರಾಪ್ತ ಮಕ್ಕಳ ಸಂಖ್ಯೆ ಹೆಚ್ಚುತ್ತಿದ್ದು, ಇದು ಒಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಕಳೆದ ವರ್ಷ ಹೊರ ರಾಜ್ಯಗಳಿಂದ ಗೋವಾಕ್ಕೆ ಓಡಿ ಬಂದಿದ್ದ 24 ಮಕ್ಕಳನ್ನು ಕೊಂಕಣ ರೈಲ್ವೆ ಪೋಲಿಸರು ವಷಕ್ಕೆ ಪಡೆದು ಮೆರಶಿಯಲ್ಲಿರುವ ಅಪನಾ ಘರ್ ಗೆ ಕಳುಹಿಸಿದ್ದಾರೆ.

ಕಳೆದ ವರ್ಷ ಕೊಂಕಣ ರೈಲ್ವೆ ಮೂಲಕವಾಗಿ ಗೋವಾಕ್ಕೆ ಓಡಿಬಂದ ಮಕ್ಕಳ ಪೈಕಿ ನೆರೆಯ ರಾಜ್ಯ ಕರ್ನಾಟಕ ಮ ಮಹಾರಾಷ್ಟ್ರ, ಕೇರಳ ರಾಜ್ಯಗಳ ಮಕ್ಕಳು ಒಳಗೊಂಡಿದ್ದಾರೆ. ಹಲವು ಸಂದರ್ಭದಲ್ಲಿ ಈ ಮಕ್ಕಳು ಮನೆ ಬಿಟ್ಟು ಓಡಿಬಂದ ನಂತರ ಅಲ್ಲಿ ಪೋಲಿಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗದಿರುವುದು ಖೇದಕರ ಸಂಗತಿ. ಅನಕ್ಷರತೆ ಮತ್ತು ಬಡತನ ಇದಕ್ಕೆ ಕಾರಣ ಎಂದೇ ಹೇಳಲಾಗುತ್ತದೆ.

ಗೋವಾದಲ್ಲಿ ಈ ಮಕ್ಕಳು ಸಿಕ್ಕಿದ ನಂತರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪೋಲಿಸರು ಪ್ರಶ್ನಿಸಿದಾಗ ಎಲ್ಲ ಮಾಹಿತಿ ಹೊರಬರುತ್ತಿದೆ. ನಂತರ ಅವರ ಪಾಲಕರನ್ನು ಸಂಪರ್ಕಿಸಿ ಅವರ ಮಕ್ಕಳನ್ನು ಅವರಿಗೆ ಒಪ್ಪಿಸುವ ಕಾರ್ಯವನ್ನು ಗೋವಾ ರೈಲ್ವೆ ಪೋಲಿಸರು ಮಾಡಿದ್ದಾರೆ.

ಈ ಕುರಿತಂತೆ ಮಡಗಾಂವ ರೈಲ್ವೆ ಸೇವಾ ವಿಭಾಗದ ವೈದ್ಯರಾದ ವೆಂಕಟೇಶ್ ಹೆಗಡೆ ಪ್ರತಿಕ್ರಿಯೆ ನೀಡಿ- ಇದು ಒಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದೆ. ಬಡತನ ಮತ್ತು ಇತರ ಕಾರಣಗಳಿಂದ ಈ ಅಪ್ರಾಪ್ತ ಮಕ್ಕಳು ಗೋವಾಕ್ಕೆ ಮನೆ ಬಿಟ್ಟು ಓಡಿ ಬರುತ್ತಿರುವ ಘಟನೆ ನಡೆಯುತ್ತಿದೆ ಎಂದರು.