ಸುದ್ಧಿಕನ್ನಡ ವಾರ್ತೆ
Goa-Belagavi: ಚೋರ್ಲಾ ಘಾಟ್ ಮೂಲಕ ಬೆಳಗಾವಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ದುರಸ್ತಿ ಕಾಮಗಾರಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಭಾರಿ ಪ್ರಮಾಣದ ಹೊಂಡ ಮತ್ತು ದುರಸ್ತಿಯಿಲ್ಲದ ರಸ್ತೆಯಿಂದಾಗಿ ಈ ಮಾರ್ಗದ ಪ್ರವಾಸ ಕಷ್ಟಕರವಾಗಿತ್ತು. ಇದೀಗ ಈ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡರೆ ಗೋವಾ-ಕರ್ನಾಟಕ ಪ್ರವಾಸ ಮಾಡುವ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಫೆಬ್ರುವರಿ ತಿಂಗಳಾಂತ್ಯದ ವೇಳೆಗೆ ಈ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಕರ್ನಾಟಕ ಲೊಕೋಪಯೋಗಿ ಇಲಾಖೆಯು ಚೋರ್ಲಾ ಘಾಟ್ ರಸ್ತೆಯ ದುರಸ್ತಿ ಕಾಮಗಾರಿ ನಡೆಸುತ್ತಿದೆ. ಕಳೆದ 10 ವರ್ಷಗಳಲ್ಲಿ ಈ ರಸ್ತೆಯ ಸ್ಥಿತಿ ಅತ್ಯಂತ ಕನಿಷ್ಠ ಎಂಬಂತಾಗಿತ್ತು. ಸುಮಾರು 51 ಕಿ.ಮಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದರಿಂದ ಈ ಮಾರ್ಗದಲ್ಲಿ ಓಡಾಟ ನಡೆಸುವ ವಾಹನ ಸವಾರರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡರೆ ಗೋವಾ ಬೆಳಗಾವಿ ಸಂಪರ್ಕಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ಕರ್ನಾಟಕ ಲೋಕೋಪಯೋಗಿ ಇಲಾಖೆಯು ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಪ್ರಭಾ ನದಿಗೆ ಇದ್ದ ಬ್ರಿಟೀಷ ಕಾಲದ ಹಳೇದ ಸೇತುವೆಯನ್ನು ಕೆಡವಿ ಹೊಸ ಸೇತುವೆಯ ನಿರ್ಮಾಣ ಕಾರ್ಯ ಕೈಗೆತ್ತಿಕೊಂಡಿದೆ. ಈ ಸೇತುವೆಯ ನಿರ್ಮಾಣಕ್ಕೆ ಕಳೆದ ವರ್ಷ ಕರ್ನಾಟಕ ಲೋಕೋಪಯೋಗಿ ಇಲಾಖೆಯು 58 ಕೋಟಿ ರೂ ನಿಧಿ ಮಂಜೂರು ಮಾಡಿತ್ತು. ಇದೀಗ ಕರ್ನಾಟಕ ಗಡಿ ಭಾಗದ ರಸ್ತೆ ದುರಸ್ತಿ ಕಾರ್ಯ ಇದೀಗ ಅಂತಿಮ ಹಂತಕ್ಕೆ ಬಂದು ತಲುಪಿದಂತಾಗಿದೆ.