ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸನ್ ಬರ್ನ್ ಮಹೋತ್ಸವ (Sun Burn Festival) ಆಯೋಜನೆಯ ಶುಲ್ಕದಿಂದ ರಾಜ್ಯ ಸರ್ಕಾರಕ್ಕೆ 2 ಕೋಟಿ 27 ಲಕ್ಷ 15 ಸಾವಿರ ರೂ. ಆದಾಯ ಲಭಿಸಲಿದೆ. ಇದಲ್ಲದೇ ಸಂಘಟನಾ ಸಂಸ್ಥೆಯು 1 ಕೋಟಿ 99 ಲಕ್ಷದ 65 ಸಾವಿರ ಠೇವಣಿ ಇಡಬೇಕಾಗುತ್ತದೆ. ಮಹೋತ್ಸವದ ನಂತರ ಠೇವಣಿ ಹಣವನ್ನು ಕಂಪನಿಗೆ ಹಿಂತಿರುಗಿಸಲಾಗುತ್ತದೆ.
ಮೂಲಗಳ ಪ್ರಕಾರ ಸನ್ ಬರ್ನ್ ಫೆಸ್ಟಿವಲ್ ಗೆ (SunBurn Festival) ಕಂಪನಿಯು 1,92,50,000 ರೂ. ಭರಿಸಬೇಕಾಗಲಿದೆ, ಕಂಪನಿಯು ಅದರ ಮೇಲೆ 3,46,5000 ಜಿಎಸ್ಟಿ ಪಾವತಿಸಬೇಕು. ಈ ಎಲ್ಲ ಮೊತ್ತ 2 ಕೋಟಿ 27 ಲಕ್ಷ 15 ಸಾವಿರ ರೂ. ಆಗಲಿದೆ. ಪ್ರವಾಸೋದ್ಯಮ ಉನ್ನತಾಧಿಕಾರ ಸಮಿತಿಯ ಷರತ್ತುಬದ್ಧ ಅನುಮೋದನೆಯ ನಂತರ ಈ ಶುಲ್ಕ ಜಾರಿಗೊಳಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆಯು ಧಾರಗಳ ಪಂಚಾಯತ್ ಅನುಮೋದನೆಯ ನಂತರ ಸನ್ ಬರ್ನ್ ಉತ್ಸವಕ್ಕೆ ತಾತ್ವಿಕ ಅನುಮೋದನೆ ನೀಡಿದೆ. ಉತ್ಸವವು ಡಿಸೆಂಬರ್ 28 ರಿಂದ 30 ರವರೆಗೆ ನಡೆಯಲಿದೆ. ಕೋವಿಡ್ ಸಾಂಕ್ರಾಮಿಕದ ಅವಧಿಯನ್ನು ಹೊರತುಪಡಿಸಿ ರಾಜ್ಯದಲ್ಲಿ ಪ್ರತಿ ವರ್ಷ ಹೊಸ ವರ್ಷದ ಕೊನೆಯಲ್ಲಿ ಸನ್ಬರ್ನ್ ಮಹೋತ್ಸವವನ್ನು ಆಯೋಜಿಸಲಾಗುತ್ತದೆ. ಈ ವರ್ಷವೂ ಈ ಉತ್ಸವ ಗೋವಾದಲ್ಲಿ ನಡೆಯಲಿದೆ.
ಈ ಮಹೋತ್ಸವಕ್ಕೆ ಎಲ್ಲಾ ಅನುಮತಿಗಳನ್ನು ಪಡೆಯುವುದು ಸಂಘಟನಾ ಕಂಪನಿಯ ಜವಾಬ್ದಾರಿಯಾಗಿದೆ. ಅದಕ್ಕಾಗಿ ಕಂಪನಿಯು ಪಂಚಾಯತ್ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ ಸೇರಿದಂತೆ ಇತರ ಎಲ್ಲ ಅನುಮತಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲ ಅನುಮತಿ ಪಡೆದ ನಂತರವೇ ಉತ್ಸವಕ್ಕೆ ಅನುಮತಿ ನೀಡಲಿದೆ. ರಾಜ್ಯದಲ್ಲಿ ಹಲವು ವರ್ಷಗಳಿಂದ ಸನ್ ಬರ್ನ್ ಮಹೋತ್ಸವ ಆಯೋಜಿಸಲಾಗುತ್ತಿದೆ. ಸನ್ಬರ್ನ್ ಮಹೋತ್ಸವವು ಪ್ರವಾಸೋದ್ಯಮ-ಸಂಬಂಧಿತ ವ್ಯವಹಾರಗಳಿಗೆ ಪ್ರಯೋಜನವನ್ನು ನೀಡುತ್ತದೆ. ಅಗತ್ಯ ಪರವಾನಿಗೆ ಪಡೆದು ಶಿಸ್ತುಬದ್ಧವಾಗಿ ಮಹೋತ್ಸವ ಆಚರಿಸಲು ತೊಂದರೆ ಇಲ್ಲ ಎಂಬುದು ಸರ್ಕಾರದ ನಿಲುವಾಗಿದೆ.
ಸನ್ಬರ್ನ್ನ ಸಂಘಟಕರಾದ ಸ್ಪೇಸ್ಬೌಂಡ್ ವೆಬ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ನವೆಂಬರ್ 13 ರಂದು ಪರವಾನಗಿಗಾಗಿ ಪ್ರವಾಸೋದ್ಯಮ ಇಲಾಖೆಗೆ ಅರ್ಜಿ ಸಲ್ಲಿಸಿತ್ತು. ಪ್ರವಾಸೋದ್ಯಮ ಉನ್ನತ ಮಟ್ಟದ ಸಮಿತಿ ಸಭೆ ನಡೆಸಿ ಅನುಮೋದನೆಗೆ ಶಿಫಾರಸು ಮಾಡಿದೆ. ನಂತರ ಈ ಶಿಫಾರಸನ್ನು ಪ್ರವಾಸೋದ್ಯಮ ಇಲಾಖೆ ಅನುಮೋದಿಸಿದೆ. ಬಾಂಬೆ ಹೈಕೋರ್ಟ್ ಕೂಡ ಈ ಉತ್ಸವಕ್ಕೆ ಷರತ್ತುಬದ್ಧ ಅನುಮೋದನೆ ನೀಡಿದೆ. ಆದರೆ ಇದೇ ವೇಳೆ ಧಾರಗಳ ಗ್ರಾಮಸಭೆಯಲ್ಲಿ ಸನ್ ಬರ್ನ ಮಹೋತ್ಸವದ ವಿರುದ್ಧ ನಿರ್ಣಯ ಅಂಗೀಕರಿಸಲಾಯಿತು. ಈ ನಿರ್ಧಾರವನ್ನು ಸ್ಪೇಸ್ಬೌಂಡ್ ಸವಾಲು ಮಾಡಿದೆ.
ಸನ್ ಬರ್ನ ವೀಕ್ಷಣೆಗೆ ಲಕ್ಷಾಂತರ ಪ್ರವಾಸಿಗರು ದೇಶ ವಿದೇಶಗಳಿಂದ ಗೋವಾಕ್ಕೆ ಆಗಮಿಸಲಿದ್ದಾರೆ.