ಸುದ್ಧಿಕನ್ನಡ ವಾರ್ತೆ
Goa: ಗೋವಾದ ಪೆಡ್ನೆ ಶಾಸಕ ಪ್ರವೀಣ ಅರ್ಲೆಕರ್ ರವರನ್ನು ಶಾಸಕ ಸ್ಥಾನದಿಂದ ಬಲವಂತವಾಗಿ ರಾಜೀನಾಮೆ ಕೊಡಿಸಬೇಕು. ಬಿಹಾರದಲ್ಲಿ ರಾಜ್ಯಪಾಲರಾಗಿರುವ ಗೋಮಂತಕ ಪುತ್ರ ರಾಜೇಂದ್ರ ಅರ್ಲೆಕರ್ ರವರನ್ನು ಗೋವಾಕ್ಕೆ ತರಬೇಕು ಎಂಬ ಪ್ರಸ್ತಾವನೆಯೊಂದಿಗೆ ಗೋವಾ ಬಿಜೆಪಿ ಗುಂಪು ದೆಹಲಿ ತಲುಪಿತ್ತು ಎಂಬ ಮಾಹಿತಿ ಹೊರಬಿದ್ದಿದೆ.
ಬಿಹಾರದ ರಾಜ್ಯಪಾಲರಾಗಿರುವ ರಾಜೇಂದ್ರ ಅರ್ಲೇಕರ್ ರವರಿಗೆ ಗೋವಾ ಮುಖ್ಯಮಂತ್ರಿ ಸ್ಥಾನ ನೀಡಿ ನಂತರ ಅವರನ್ನು ಪೆಡ್ನೆಯಲ್ಲಿ ಚುನಾವಣೆಯಲ್ಲಿ ನಿಲ್ಲಿಸಿ ಆರಿಸಿ ತರಬೇಕು ಎಂಬುದು ಬಿಜೆಪಿಯಲ್ಲಿ ಆಂತರಿಕ ಸಿದ್ಧತೆ ನಡೆದಿತ್ತು ಎಂಬುದು ರಾಜಕೀಯ ಚರ್ಚೆಯಾಗಿದೆ. ಇವೆಲ್ಲವನ್ನೂ ಗಮನಿಸಿದ್ದ ಬಿಜೆಪಿ ವರಿಷ್ಠರು ಪ್ರವೀಣ ಅರ್ಲೆಕರ್ ರವರನ್ನು ದೆಹಲಿಗೆ ಆಹ್ವಾನಿಸಿದ್ದರು, ಆದರೆ ಅವರು ದೆಹಲಿಗೆ ತೆರಳಲಿಲ್ಲ ಎನ್ನಲಾಗಿದೆ.
ಗೋವಾ ರಾಜ್ಯ ಆರೋಗ್ಯ ಮಂತ್ರಿಯಾಗಿರುವ ವಿಶ್ವಜಿತ್ ರಾಣೆ ರವರು ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ರವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಗೋವಾದಲ್ಲಿ ಈ ರಾಜಕೀಯ ಚರ್ಚೆ ಆರಂಭಗೊಂಡಿದೆ. ಇದರಿಂದಾಗಿ ರಾಜ್ಯಪಾಲ ರಾಜೇಂದ್ರ ಅರ್ಲೆಕರ್ ರವರ ಹೆಸರು ಕೇಳಿಬಂದಿದೆ.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ರವರು ಕೆಲವು ದಿನಗಳಿಂದ ಗೋವಾದ ರಾಜಕೀಯ ಪರಿಸ್ಥಿಯನ್ನು ಗಮನಿಸುತ್ತಿದ್ದಾರೆ. ಹವು ಸಚಿವರು, ಶಾಸಕರು ಕೂಡ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಡಿಸೆಂಬರ್ 30 ರಂದು ದೆಹಲಿಯಲ್ಲಿ ಬಿಜೆಪಿಯ ಮಹತ್ವದ ಸಭೆ ನಡೆಯಲಿದ್ದು ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರೊಂದಿಗೆ ಗೋವಾದ ರಾಜಕೀಯ ವಿಚಾರವಾಗಿ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ.
ಬಿಹಾರದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ರವರು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ- ಗೋವಾ ಮುಖ್ಯಮಂತ್ರಿ ಹುದ್ದೆಯ ಕುರಿತು ಯಾವುದೇ ಪ್ರಸ್ತಾವ ನನ್ನ ಬಳಿ ಬಂದಿಲ್ಲ, ಪಕ್ಷದ ನಾಯಕರು ನನ್ನೊಂದಿಗೆ ಈ ಕುರಿತು ಮಾತನಾಡಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಗೋವಾದ ರಾಜಕೀಯದಲ್ಲಿ ಬಾರಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಅಂತೆಯೇ ಗೋವಾದ ಬಿಜೆಪಿ ನಾಯಕರು ದೆಹಲಿ ಓಡಾಟ ಕೂಡ ಇವೆಲ್ಲಕ್ಕೆ ಪುಷ್ಠಿ ನೀಡುತ್ತಿದೆ.