ಸುದ್ಧಿಕನ್ನಡ ವಾರ್ತೆ
Goa: ಲಲಿತಾ ಭಜಹನಾ ಮಂಡಳಿ ಎಂಬ ಸಮೂಹವನ್ನು ಕಟ್ಟಿಕೊಂಡು ಅಧ್ಬುತ ಕಾರ್ಯವನ್ನು ನೀವೆಲ್ಲರೂ ಮಾಡುತ್ತಿದ್ದೀರಿ. ಭಗವಧ್ಗೀತೆಯ 18 ಅಧ್ಯಾಯದ ಬಗ್ಗೆ 18 ವರ್ಷ ಬೇಕಾದರೂ ಮಾತನಾಡಬಹುದು. ಇದು ಭಗವಂತನಿಂದಲೇ ಹೇಳಲ್ಪಟ್ಟಂತಹ ಗೀತೆ, ಅದಕ್ಕಾಗಿಯೇ ಇದಕ್ಕೆ ಇಷ್ಟೊಂದು ಮಹತ್ವ ಬಂದಿದೆ ಎಂದು ಸಂಸ್ಕøತ ಪ್ರಾಧ್ಯಾಪಕ ಹಾಗೂ ಉಪನ್ಯಾಸಕರಾದ ಮಹಾಬಲ ಭಟ್ ನುಡಿದರು.

 

ಗೋವಾದ ಮಾರ್ಶೆಲ್ ನ ಶ್ರೀ ಸಾಯಿಬಾಬಾ ಭಕ್ತ ಮಂದಿರದಲ್ಲಿ ಶನಿವಾರ ಮಧ್ಯಾನ್ಹ ಲಲಿತಾ ಭಜನಾ ಮಂಡಳಿ ಗೋವಾ ರವರು ನಡೆಸಿದ ಭಗವಧ್ಗೀತಾ ಸಪ್ತಾಹದ ಸಮಾಪ್ತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.

 

ಎಲ್ಲ ಗೃಂಥಗಳನ್ನು ಮನುಷ್ಯರು ರಚಿಸಿದ್ದರೆ, ಇದು ಭಗವಧ್ಗೀತೆ, ಇದನ್ನು ಭಗವಂತನೇ ರಚಿಸಿದ್ದು. ಪ್ರತಿಯೊಬ್ಬರೂ ಕೂಡ ಪಠಿಸಬೇಕಾದ ಗೃಂಥ ಭಗವಧ್ಗೀತೆ. ಈ ಶ್ಲೋಕಗಳನ್ನು ಸ್ತೋತ್ರಗಳನ್ನು ಹೇಳುವಾಗ ಅದನ್ನು ಕೇಳುವುದೇ ಒಂದು ಆನಂದದ ವಿಷಯ. ಯೋಗ ಧ್ಯಾನ ಏನೇ ಮಾಡಿದರೂ ಕೂಡ ಅದಕ್ಕೆ ತಕ್ಕಂತೆ ನಾವು ಜೀವನವನ್ನು ರೂಪಿಸಿಕೊಳ್ಳಬೇಕು, ಇಲ್ಲವಾದಲ್ಲಿ ನಾವು ಏನೇ ಮಾಡಿದರೂ ಪ್ರಯೋಜನವಾಗುವುದಿಲ್ಲ. ಪ್ರತಿ ವರ್ಷ ಲಲಿತಾ ಭಜನಾ ಮಂಡಳಿ ಭಗವಧ್ಗೀತೆ ಪಾರಾಯಣ ಮಾಡಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೀರಿ ಇದು ಒಂದು ಅಧ್ಬುತ ಕಾರ್ಯ ಎಂದು ಮಹಾಬಲ ಭಟ್ ನುಡಿದರು.

 

ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಗವದ್ಗೀತಾ ಆನ್ ಲೈನ್ ಕಲಿಕೆಯ ಗುರುಗಳಾದ ಸುಬ್ರಹ್ಮಣ್ಯ ಗಾಂವಕರ್ ಬಾಗಿನಕಟ್ಟಾ, ಪತ್ರಕರ್ತ ಪ್ರಕಾಶ ಭಟ್ ಮಾತನಾಡಿದರು. ಈ ಸಂದರ್ಭದಲ್ಲಿ ಶರ್ವಾಣಿ ಭಟ್ ಹಾಗೂ ಶ್ರೀಲತಾ ಭಟ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮ ಆಯೋಜಕರಾದ ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿ- ನಾವೆಲ್ಲರೂ ಕೂಡ ಇಂದು ಶೃದ್ಧಾ ಭಕ್ತಿಯಿಂದ ಭಗವಂತನ ಸೇವೆ ಸಲ್ಲಿಸಿದ್ದೇವೆ. ಲಲಿತಾ ಭಜನಾ ಮಂಡಳಿಯ ಸ್ತ್ರೀ ಸಮೂಹ ಭಗವಧ್ಗೀತೆ ಹಾಗೂ ಇತರ ಶ್ಲೋಕ ಪಠಣಗಳನ್ನು ನಿಸ್ವಾರ್ಥದಿಂದ ಶೃದ್ಧಾಭಕ್ತಿಯಿಂದ ಪಠಿಸುತ್ತ ಸೇವೆಸಲ್ಲಿಸುತ್ತಾ ಬಂದಿದ್ದಾರ. ಇಂದು ಸದ್ಗುರು ಸಾಯಿನಾಥನ ಸನ್ನಿಧಾನದಲ್ಲಿ ಭಗವದ್ಗೀತಾ ಸಪ್ತಾಹದ ಸಮಾಪ್ತಿಯ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸುವ ಅವಕಾಶ ನಮಗೆ ಲಭಿಸಿದೆ. ನಮ್ಮ ಆಮಂತ್ರಣಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು. ರಾಜೇಶ್ವರಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಪುರೋಹಿತರಾದ ನಾರಾಯಣ ಭಟ್ ವಂದನಾರ್ಪಣೆಗೈದರು.

 

ಪುರೋಹಿತರಾದ ನಾರಾಯಣ ಭಟ್ ಮತ್ತು ಸರಸ್ವತಿ ಭಟ್ ರವರು ಭಗವಧ್ಗೀತಾ ಪಾರಾಯಣದ ಸಮಾರೋಪ ಕಾರ್ಯಕ್ರಮದ ಆಯೋಜನೆ ಮಾಡಿದ್ದರು. ಲಲಿತಾ ಭಜನಾ ಮಂಡಳಿಯ ವಾಣಿಶ್ರೀ ಭಟ್ ಮತ್ತು ರಾಜೇಶ್ವರಿ ಭಟ್ ರವರನ್ನು ಒಳಗೊಂಡು ಮಹಿಳಾ ಸಮೂಹದಿಂದ ಭಗವಧ್ಗೀತಾ ಪಾರಾಯಣ ಮತ್ತು ಸ್ತೋತ್ರಪಠನೆ ನಡೆಸಲಾಯಿತು. ಶ್ರೀಮದ್ಭಗವಧ್ಗೀತಾ ಗೃಂಥಕ್ಕೆ ಪೂಜೆ ಸಲ್ಲಿಸುವ ಮೂಲಕ ಹಿರೀಯ ಪುರೋಹಿತ ನಾರಾಯಣ ಭಟ್ ಪಾರಾಯಣಕ್ಕೆ ಚಾಲನೆ ನೀಡಿದರು.