ಸುದ್ಧಿಕನ್ನಡ ವಾರ್ತೆ
Goa: ವಾಸ್ಕೊ-ಸಿಂಧಗಿ ಬಸ್ ನಲ್ಲಿ ಪ್ರಯಾಣಿಕರ ಕೊರತೆಯ ಕಾರಣ ಈ ಬಸ್ ಸಂಚಾರ ಬಂದ್ ಆಗುವ ಆತಂಕದಲ್ಲಿದೆ. ವಿಜಯಪುರ ಜಿಲ್ಲೆಯ ಸಾರಿಗೆ ಸಂಸ್ಥೆಯ ಇಲಾಖೆಯ ಅಧಿಕಾರಿಗಳು ಈ ಕುರಿತ ಸಂಪೂರ್ಣ ವಿವರವನ್ನು ನಮಗೆ ಕಳುಹಿಸಿಕೊಟ್ಟಿದ್ದಾರೆ. ಇದರಿಂದಾಗಿ ಈ ಬಸ್ ಓಡಾಟ ವ್ಯವಸ್ಥೆ ಬಂದ್ ಆಗದಂತೆ ನೋಡಿಕೊಳ್ಳಬೇಕಾದರೆ ಈ ಮಾರ್ಗಕ್ಕೆ ಇತರ ಸಾರಿಗೆಯನ್ನು ಬಳಸದೆಯೇ ಜನತೆ ವಾಸ್ಕೊ-ಸಿಂಧಗಿ ಬಸ್ ನಲ್ಲಿಯೇ ಪ್ರಯಾಣಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಗೋವಾ ರಾಜ್ಯಾಧ್ಯಕ್ಷ ಮಂಜುನಾಥ ನಾಟೀಕರ್ ಮನವಿ ಮಾಡಿದ್ದಾರೆ.
ವಾಸ್ಕೊದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು- ಕರ್ನಾಟಕ ರಕ್ಷಣಾ ವೇದಿಕೆಯು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಪ್ರವೀಣಕುಮಾರ್ ಶೆಟ್ಟಿ ರವರ ನೇತೃತ್ವದಲ್ಲಿ ಸತತ ಹೋರಾಟ ನಡೆಸಿ ಬಂದ್ ಆಗಿರುವ ವಾಸ್ಕೊ-ಸಿಂಧಗಿ ಬಸ್ ಸೇರಿದಂತೆ ಕರ್ನಾಟಕದ ವಿವಿಧ ಮಾರ್ಗಗಳಿಗೆ ಹಲವು ಬಸ್ ಓಡಾಟ ಪುನರಾರಂಭಗೊಳ್ಳುವಂತೆ ಮಾಡಿದ್ದೇವೆ. ಆದರೆ ಸದ್ಯ ವಾಸ್ಕೊ-ಸಿಂಧಗಿ ಬಸ್ ನಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ಆದಾಯ ತುಂಬಾ ಕಡಿಮೆಯಿದೆ ಎಂದು ವಿಜಯಪುರ ಜಿಲ್ಲೆಯ ಸಾರಿಗೆ ಸಂಸ್ಥೆಯ ಇಲಾಖೆಯ ಅಧಿಕಾರಿಗಳು ಸಂಪೂರ್ಣ ವಿವರವನ್ನು ಕಳುಹಿಸಿದ್ದಾರೆ. ಈ ಬಸ್ ಸೌಲಭ್ಯವನ್ನು ಮತ್ತೆ ಬಂದ್ ಆಗದಂತೆ ನಾವು ನೋಡಿಕೊಳ್ಳಬೇಕಾಗಿದೆ. ಇದರಿಂದಾಗಿ ಈ ಮಾರ್ಗಕ್ಕೆ ಓಡಾಟ ನಡೆಸುವರು ಇತರ ಸಾರಿಗೆಯನ್ನು ಬಳಸದೆಯೇ ಕರ್ನಾಟಕ ಸಾರಿಗೆ ಬಸ್ಸಿನಲ್ಲಿಯೇ ಪ್ರಯಾಣಿಸಬೇಕು ಎಂದು ಮಂಜುನಾಥ ನಾಟೀಕರ್ ಮನವಿ ಮಾಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕರ್ನಾಟಕದ ವಿವಿಧ ಭಾಗಗಳಿಂದ ಗೋವಾಕ್ಕೆ ಓಡಾಟ ನಡೆಸುವ ಬಸ್ ಗಳು ಬಂದ್ ಆಗಿತ್ತು. ಇದರಿಂದಾಗಿ ಪ್ರತಿದಿನ ಗೋವಾ ಕರ್ನಾಟಕ ಓಡಾಟ ನಡೆಸುವ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗುತ್ತಿತ್ತು. ಇದರಿಂದಾಗಿ ಕರ್ನಾಟಕ ರಕ್ಷಣಾ ವೇದಿಕೆಯು ನಮ್ಮ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ನಮ್ಮ ಸತತ ಹೋರಾಟದ ಫಲವಾಗಿ ಗೋವಾಕ್ಕೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಲವು ಬಸ್ಸುಗಳು ಮತ್ತೆ ಓಡಾಟ ಆರಂಭಿಸಿದ್ದವು. ಆದರೆ ಇದೀಗ ಪ್ರಯಾಣಿಕರ ಕೊರತೆಯಿಂದಾಗಿ ಮತ್ತೆ ತೊಂದರೆ ಎದುರಾಗಿದೆ. ಈ ವ್ಯವಸ್ಥೆಯನ್ನು ನಾವು ಉಳಿಸಿಕೊಳ್ಳಬೇಕಾದರೆ ಬೇರೆ ಸಾರಿಗೆ ವ್ಯವಸ್ಥೆ ಅವಲಂಭಿಸದೆಯೇ ಕರ್ನಾಟಕ ಸರ್ಕಾರದ ಸಾರಿಗೆ ಬಸ್ಸುಗಳನ್ನೇ ಅವಲಂಭಿಸಬೇಕು ಎಂದು ಮಂಜುನಾಥ ನಾಟೀಕರ್ ಮನವಿ ಮಾಡಿದರು.