ಸುದ್ಧಿಕನ್ನಡ ವಾರ್ತೆ
Goa: ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಕೇವಲ 10 ವರ್ಷಗಳಲ್ಲಿ ರಾಜ್ಯವನ್ನು ಅಭಿವೃದ್ಧಿಪಡಿಸಿದೆ, ಕಳೆದ 50 ವರ್ಷಗಳಲ್ಲಿ ಆಗದ ಅಭಿವೃದ್ಧಿಯನ್ನು ಕಳೆದ 10 ವರ್ಷಗಳಲ್ಲಿ ಬಿಜೆಪಿ ಮಾಡಿ ತೋರಿಸಿದೆ. ಗೋವಾದ ಸವಾರ್ಂಗೀಣ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ನುಡಿದರು.
ಅವರು ಗೋವಾ ಬಾಂಬೋಲಿಯ ಗೋವಾ ವಿಶ್ವವಿದ್ಯಾಲಯ ಮೈದಾನದಲ್ಲಿ ಗುರುವಾರ ನಡೆದ 63ನೇ ಗೋವಾ ಮುಕ್ತಿ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಗೋವಾದ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಳೆದ ಹತ್ತು ವರ್ಷಗಳಲ್ಲಿ ಹಲವು ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿವೆ. ಅದರ ಫಲವನ್ನು ಗೋವಾ ಮತ್ತು ಗೋಮಾಂತಿಕ ಜನರು ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸ್ವಯಂಪೂರ್ಣ ಗೋವಾದಿಂದ ಅನೇಕರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜ್ಯಗಳು ಈ ಉಪಕ್ರಮವನ್ನು ಗಮನಿಸಿವೆ. ಕೇಂದ್ರ ಸರ್ಕಾರದ ನೆರವಿನೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವಲ್ಲಿ ರಾಜ್ಯ ಸರ್ಕಾರವು ನಿರೀಕ್ಷಿತ ಯಶಸ್ಸನ್ನು ಪಡೆಯುತ್ತಿದೆ ಎಂದು ಸಿಎಂ ಸಾವಂತ್ ಹೇಳಿದರು.
ಹರ್ ಘರ್ ನಲ್ ಯೋಜನೆಯಡಿ ಶೇ 40 ರಷ್ಟು ಜನರಿಗೆ ಉಚಿತ ನೀರು ಸಿಗುತ್ತಿದೆ. ಮೀನುಗಾರಿಕೆ ಯೋಜನೆಯಿಂದ 500 ಕ್ಕೂ ಹೆಚ್ಚು ಮೀನುಗಾರರು ಪ್ರಯೋಜನ ಪಡೆದಿದ್ದಾರೆ. ರಾಜ್ಯದಲ್ಲಿ 1,130 ಕೋಟಿ ವೆಚ್ಛದಲ್ಲಿ ಭೂಗತ ವಿದ್ಯುತ್ ಮಾರ್ಗ ಕಾಮಗಾರಿ ನಡೆಯುತ್ತಿದೆ. ಸಂಪರ್ಕವನ್ನು ಸುಧಾರಿಸಲು 4ಜಿ ಬಿಎಸ್.ಎನ್.ಎಲ್ ಟವರ್ಗಳ ಜಾಲವನ್ನು ಹೆಣೆಯಲಾಗುತ್ತಿದೆ. ಈ ವರ್ಷ 1,059 ಕೋಟಿ ಮೌಲ್ಯದ 15 ಯೋಜನೆಗಳಿಗೆ ‘ಐಪಿಬಿ’ ಅನುಮೋದನೆ ನೀಡಿದ್ದು, 1,894 ಜನರಿಗೆ ಉದ್ಯೋಗ ಸಿಗಲಿದೆ ಎಂದು ಸಿಎಂ ಸಾವಂತ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಹದಾಯಿ ಹರಿವು ಕಾಯ್ದುಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಸರಿಯಾದ ರೀತಿಯಲ್ಲಿ ಹೋರಾಟ ನಡೆಸುತ್ತಿದೆ ಎಂದೂ ಮುಖ್ಯಮಂತ್ರಿ ಸಾವಂತ್ ಹೇಳಿದರು.