ಸುದ್ಧಿಕನ್ನಡ ವಾರ್ತೆ
ಪಣಜಿ: ಪರ್ವರಿ ಮೇಲ್ಸೇತುವೆ ಕಾಮಗಾರಿಯಿಂದ ಈ ಭಾಗದಲ್ಲಿ ಧೂಳು ಮಾಲಿನ್ಯ ಉಂಟಾಗಿದ್ದು, ಅಳತೆ ಮಾಡಲು ಎರಡು ಕಡೆ ಅಳತೆ ಯಂತ್ರಗಳನ್ನು ಅಳವಡಿಸಲಾಗುವುದು. ಈ ಸಾಧನಗಳಿಂದ ಫ್ಲೈಓವರ್ ಕಾಮಗಾರಿಯಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾಹಿತಿಯನ್ನು ಪಡೆಯುತ್ತದೆ.

ಆರ್‍ಆರ್‍ಎಸ್‍ಎಂ ಇನ್‍ಫ್ರಾ ಕಂಪನಿಯಿಂದ ಪರ್ವರಿ ಮತ್ತು ಗಿರಿ ನಡುವೆ 5 ಕಿ.ಮೀ ದೂರದ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಮೇಲ್ಸೇತುವೆಯಲ್ಲಿ 88 ಪಿಲ್ಲರ್‍ಗಳಿದ್ದು, ಈ ಮೇಲ್ಸೇತುವೆಗಾಗಿ ಅಗೆದ ಮಣ್ಣನ್ನು ರಸ್ತೆಬದಿಯಲ್ಲಿ ಸುರಿಯಲಾಗಿದೆ. ಈ ಮಣ್ಣಿನಿಂದಾಗಿ ಎಲ್ಲೆಡೆ ಧೂಳಿನ ಸಾಮ್ರಾಜ್ಯ ವ್ಯಾಪಿಸಿದೆ. ಈ ಬಗ್ಗೆ ಪರಿಶೀಲನೆ ನಡೆಸಿದ ಮಾಲಿನ್ಯ ನಿಯಂತ್ರಣ ಮಂಡಳಿಯು ಆ ಪ್ರದೇಶದಲ್ಲಿ ನೀರು ಸಿಂಪಡಿಸುವುದು ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಳ್ಳುವಂತೆಯೂ ಆದೇಶಿಸಿದೆ.

ಈ ಮೇಲ್ಸೇತುವೆಯಲ್ಲಿ ಎರಡು ಸ್ಥಳಗಳಲ್ಲಿ ಮಾಲಿನ್ಯ ಮಾಪನ ಮೀಟರ್‍ಗಳನ್ನು ಅಳವಡಿಸಲಾಗುವುದು. ಇದರಿಂದ ಪ್ರತಿನಿತ್ಯ ಈ ಪ್ರದೇಶದಲ್ಲಿನ ಮಾಲಿನ್ಯದ ಮಟ್ಟವನ್ನು ಮಂಡಳಿಗೆ ತಿಳಿಯಬಹುದಾಗಿದೆ. ಇಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾದರೆ ಅದನ್ನು ತಗ್ಗಿಸುವಂತೆ ಸಂಸ್ಥೆಗೆ ಸೂಚನೆ ನೀಡುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಮಹೇಶ ಪಾಟೀಲ ಪ್ರಕಟಿಸಿದ್ದಾರೆ. ಈ ಪ್ರದೇಶದಲ್ಲಿ ಪ್ರತಿದಿನ ಟ್ಯಾಂಕರ್ ನೀರು ಸಿಂಪಡಿಸಲು ಆದೇಶ ನೀಡಲಾಗಿದ್ದು, ಪ್ರಕ್ರಿಯೆ ನಡೆಯುತ್ತಿದೆ ಎಂದು ಕಂಪನಿ ತಿಳಿಸಿದೆ.