ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾ ರಾಜ್ಯದಲ್ಲಿ ಕೃಷಿ ಭೂಮಿ ಪರಿವರ್ತನೆಯನ್ನು ತಡೆಯಲು ಕೃಷಿ ಭೂಮಿ ಹಸ್ತಾಂತರ ನಿರ್ಬಂಧ ಕಾಯ್ದೆ ಜಾರಿಗೆ ತರಲಾಗಿದೆ. ಗೋವಾ ಕಂದಾಯ ಸಂಹಿತೆ ಸೆಕ್ಷನ್ 32ನ್ನು ತಿದ್ಧುಪಡಿ ಮಾಡುವ ಮೂಲಕ ಕೃಷಿ ಜಮೀನು ರೂಪಾಂತರದ ಮೇಲಿನ ನಿರ್ಬಂಧ ಕಠಿಣಗೊಳಿಸಲಾಗಿದೆ. ಇದರಿಂದಾಗಿ ಗೋವಾದ ಕೃಷಿ ಭೂಮಿ ರಕ್ಷಣೆಯಾಗುತ್ತದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು- ಗೋವಾ ಭೂಕಂದಾಯ ಕಾಯ್ದೆ ಸೆಕ್ಷನ್ 32 ರಲ್ಲಿ ಮಾಡಿರುವ ತಿದ್ಧುಪಡಿಯು ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿಯಾಗಿ ಪರಿವರ್ತಿಸಲು ಪ್ರಮುಖ ಅಡಚಣೆಯಾಗಲಿದೆ. ನಿರ್ಬಂಧಗಳನ್ನು ಇನ್ನಷ್ಟು ಕಠಿಣಗೊಳಿಸಲಾಗಿದೆ. ಹಾಗಾಗಿ ಕೃಷಿ ಭೂಮಿಯನ್ನು ಕೃಷಿಗೆ ಮಾತ್ರ ಬಳಸುವುದಾಗಿ ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

ಹಸಿರು ವಲಯಗಳನ್ನು ಕಾಪಾಡಿಕೊಳ್ಳಲು ಎಲ್ಲಾ ರೀತಿಯ ಭೂಮಿಯನ್ನು ಪರಿವರ್ತಿಸುವುದನ್ನು ನಿಲ್ಲಿಸಲು ಪರಿವರ್ತನೆಯ ಶುಲ್ಕವನ್ನೂ ಹೆಚ್ಚಿಸಲಾಗಿದೆ.ಭೂ ಬಳಕೆ ಬದಲಾವಣೆಯ ಶುಲ್ಕವನ್ನು ಚದರ ಮೀಟರ್‍ಗೆ 200 ರೂನಿಂದ 1 ಸಾವಿರ ರೂಗೆ ಹೆಚ್ಚಳ ಮಾಡಲಾಗಿದೆ. ಆದರೆ 500 ಚದರ ಮೀಟರ್ ವರೆಗಿನ ಜಮೀನಿನ ಬಳಕೆ ಬದಲಾವಣೆಗೆ ಹಿಂದಿನ ದರವನ್ನೇ ಉಳಿಸಿಕೊಳ್ಳಲಾಗಿದೆ. ಇದೆಲ್ಲವೂ ಸಾಮಾನ್ಯ ಜನರ ಅನುಕೂಲಕ್ಕಾಗಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾಹಿತಿ ನೀಡಿದರು.