ಸುದ್ಧಿಕನ್ನಡ ವಾರ್ತೆ
Goa : ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ರಕ್ಷಣಾ ಮಂತ್ರಿಯಾಗಿದ್ದ ದಿ.ಮನೋಹರ್ ಪರೀಕರ್ ರವರು ಲೋಕಪ್ರಿಯ ನಾಯಕರಾಗಿದ್ದರು. ಇಷ್ಟೇ ಅಲ್ಲದೆಯೇ ತಮ್ಮ ಅತ್ಯಂತ ಸರಳತೆ ಮತ್ತು ಉನ್ನತ ವಿಚಾರಸರಣಿಯಿಂದ ಪರೀಕರ್ ರವರು ಜನತೆಯ ಮನದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ. ರಾಜ್ಯದ ಒಬ್ಬ ನಾಯಕ ಹೇಗಿರಬೇಕು ಎಂಬುದಕ್ಕೆ ದಿ.ಮನೋಹರ್ ಪರೀಕರ್ ಒಬ್ಬ ಉತ್ತಮ ಉದಾಹರಣೆಯಾಗಿದ್ದಾರೆ.

ಮನೋಹರ್ ಪರೀಕರ್ ರವರು ಗೋವಾದ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕನಾಗಿ, ದೇಶದ ರಕ್ಷಣಾ ಮಂತ್ರಿಯಾಗಿ ಕೈಗೊಂಡ ಉತ್ತಮ ಕಾರ್ಯಗಳು ಜನಮಾನಸದಲ್ಲಿ ಅಚ್ಚಾಗಿ ಉಳಿದಿದೆ. ರಕ್ಷಣಾ ಮಂತ್ರಿಯಾಗಿದ್ದಾಗ ಶತ್ರು ರಾಷ್ಟ್ರ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಿರ್ಣಯ ಪರೀಕರ್ ರವರ ದಿಟ್ಟ ನಿರ್ಧಾರದ ಒಂದು ಉದಾಹರಣೆ.

ಗೋವಾದ ಮಾಪ್ಸಾ ಮೂಲದವರಾದ ಮನೋಹರ್ ಪರೀಕರ್ ರವರು ತಮ್ಮ ಅಧಿಕಾರಾವಧಿಯಲ್ಲಿ ಗೋವಾದಲ್ಲಿ ಜಾರಿಗೆ ತಂದಿರುವ ಹಲವು ಜನಪ್ರೀಯ ಯೋಜನೆಗಳು ಇಂದೂ ಕೂಡ ಮುಂದುವರೆದುಕೊಂಡು ಹೋಗುತ್ತಿದೆ. ಡಿಸೆಂಬರ್ 13 ಇಂದು ಪರೀಕರ್ ರವರ ಜನ್ಮದಿನವಾಗಿದ್ದು ಗೋವಾದಲ್ಲಿ ವಿವಿದೆಡೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ರವರು ಶುಕ್ರವಾರ ಮೀರಾಮಾರ್ ನಲ್ಲಿರುವ ಮನೋಹರ್ ಪರೀಕರ್ ರವರ ಸಮಾಧಿ ಸ್ಥಳಕ್ಕೆ ತೆರಳಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ದಿ.ಪರೀಕರ್ ರವರ ಪುತ್ರ ಉತ್ಪಲ್ ಪರೀಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದು ಗೌರವ ವಂದನೆ ಸಲ್ಲಿಸಿದರು.