ಸುದ್ಧಿಕನ್ನಡ ವಾರ್ತೆ
Goa: ಪಾಕಿಸ್ತಾನದಲ್ಲಿ ಹುಟ್ಟಿ ಗೋವಾದಲ್ಲಿ ನೆಲೆಸಿರುವ ಶೇನ್ ಸೆಬಾಸ್ಟಿಯನ್ ಪೆರೇರಾ ಅವರಿಗೆ ಸಿಎಎ (CAA)  ಕಾಯ್ದೆಯಡಿ ಭಾರತೀಯ ಪೌರತ್ವ ನೀಡಲಾಗಿದೆ. ಇದಕ್ಕೂ ಮೊದಲು, ಕಾಸಾವಾಲಿಯ ಜೋಸೆಫ್ ಫ್ರಾನ್ಸಿಸ್ ಪೆರೇರಾ ಅವರು 1961 ಕ್ಕಿಂತ ಮೊದಲು ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ಹೋಗಿದ್ದರು, ಆದರೆ ಮೂಲತಃ ಗೋಮಂತಕೀಯರಾಗಿದ್ದರಿಂದ ಭಾರತೀಯ ಪೌರತ್ವವನ್ನು ಪಡೆದರು. ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪೌರತ್ವ ಪಡೆದ ಗೋವಾದ ಮೊದಲ ಪ್ರಜೆ ಫ್ರಾನ್ಸಿಸ್ ಪೆರೇರಾ. ಅದರ ನಂತರ, ಶೇನ್ ಸೆಬಾಸ್ಟಿಯನ್ ಪೆರೇರಾ ಅವರಿಗೆ ಸಿಎಎ ಕಾಯ್ದೆಯಡಿಯಲ್ಲಿ ಭಾರತೀಯ ಪೌರತ್ವ ಲಭಿಸಿದಂತಾಗಿದೆ.

ಭಾರತೀಯ ಸಂಸತ್ತು ಡಿಸೆಂಬರ್ 2019 ರಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (CAA) ಅನ್ನು ಅನುಮೋದಿಸಿತು. ಇದು ಮಾರ್ಚ್ 2024 ರಲ್ಲಿ ಕಾನೂನಾಯಿತು. ಪೌರತ್ವ ತಿದ್ದುಪಡಿ ಕಾಯ್ದೆ (CAA) ಯ ಕಾರಣದಿಂದಾಗಿ, ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ವಲಸೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಹಿಂದೂಗಳು, ಬೌದ್ಧರು, ಜೈನರು, ಪಾರ್ಸಿಗಳು, ಸಿಖ್ ಮತ್ತು ಕ್ರಿಶ್ಚಿಯನ್ನರು ಭಾರತೀಯ ಪೌರತ್ವವನ್ನು ಪಡೆಯಲು ಸಾಧ್ಯವಾಗುತ್ತಿದೆ.

ಭಾರತೀಯ ಪೌರತ್ವ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಶೇನ್ ಸೆಬಾಸ್ಟಿಯನ್ ಪೆರೇರಾ ಮಾಧ್ಯಮಗಳ ಮುಂದೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು. ಸಿಎಎ(CAA) ಕಾಯ್ದೆಯಿಂದಾಗಿ ಶೇನ್ ಸೆಬಾಸ್ಟಿಯನ್ ಪೆರೇರಾ ಅವರಂತೆ ಗೋವಾ ಮತ್ತು ದೇಶದ ಎಷ್ಟೋ ಜನರು ಪ್ರಯೋಜನ ಪಡೆಯುತ್ತಾರೆ. ಸಿಎಎ (CAA) ಕಾಯ್ದೆಗಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.