ಸುದ್ಧಿಕನ್ನಡ ವಾರ್ತೆ
Goa IFFI: ನವೆಂಬರ್ 20 ರಂದು ಗೋವಾ ರಾಜಧಾನಿ ಪಣಜಿಯಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಉಧ್ಘಾಟನೆಗೊಂಡಿದೆ. ಈ ಚಲನಚಿತ್ರೋತ್ಸವಕ್ಕೆ ದೇಶ-ವಿದೇಶಗಳಲ್ಲಿನ ಚಲನಚಿತ್ರ ಕ್ಷೇತ್ರದ ದಿಗ್ಗಜರು ಆಗಮಿಸಿದ್ದಾರೆ. ನವೆಂಬರ್ 28 ರ ವರೆಗೆ ಈ ಚಲನಚಿತ್ರೋತ್ಸವ ಜರುಗಲಿದೆ. ಗೋವಾದಲ್ಲಿ 2004 ರಿಂದ ಚಲನಚಿತ್ರೋತ್ಸವ ಆಯೋಜಿಸಲಾಗುತ್ತಿದ್ದು ಗೋವಾದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸಲು ಗೋವಾ ರಾಜ್ಯವು ಖಾಯಂ ಸ್ಥಳ ಎಂದು ಕೇಂದ್ರವು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಗೋವಾದಲ್ಲಿ ಮುಂದೆಯೂ ಕೂಡ ಪ್ರತಿ ವರ್ಷ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಗೊಳ್ಳಲಿದೆ.
ಗೋವಾದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವನ್ನು ಸಂಘಟಿಸಲು ಮತ್ತು ಸಹಾಯ ಮಾಡಲು ಗೋವಾ ಸರ್ಕಾರವು ಎಂಟರ್ ಟೈನೆಮೆಂಟ್ ಸೊಸೈಟಿಯನ್ನು ಸ್ಥಾಪಿಸಿದೆ. ಚಲನಚಿತ್ರೋತ್ಸವಕ್ಕೆ ಅಗತ್ಯ ಸೌಲಭ್ಯಗಳನ್ನು ಗೋವಾದಲ್ಲಿ ಸ್ಥಾಪಿಸಲಾಗಿದೆ. ಐನಾಕ್ಸ ಮತ್ತು ಕಲಾ ಅಕಾಡಮಿಯನ್ನು ಚಲನಚಿತ್ರ ಪ್ರದರ್ಶನಕ್ಕಾಗಿ ಬಳಸಲಾಗುತ್ತದೆ. ವರ್ಷದಿಂದ ವರ್ಷಕ್ಕೆ ಗೋವಾದಲ್ಲಿ ಚಲನಚಿತ್ರ ಮಹೋತ್ಸವವು ಹಲವು ಬದಲಾವಣೆ ಹಾಗೂ ವಿಶೇಷತೆಗಳೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸುತ್ತದೆ.
ಪ್ರಸಕ್ತ ವರ್ಷವೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಹಿನ್ನೆಲೆಯಲ್ಲಿ ಗೋವಾ ರಾಜಧಾನಿ ಪಣಜಿ ಐನಾಕ್ಸ ಪರಿಸರವನ್ನು ಅತ್ಯಾಕರ್ಷಣೀಯವಾಗಿ ಸಜ್ಜುಗೊಳಿಸಲಾಗಿದೆ.
1952 ರಲ್ಲಿ ಮುಂಬಯಿಯಲ್ಲಿ ಆರಂಔವಾದ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು 1975 ರ ನಂತರ ಪ್ರತಿ ವರ್ಷ ಆರಂಭಗೊಂಡಿತು. ನಂತರ 2004 ಕ್ಕೆ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರೀಕರ ರವರ ಪರಿಶ್ರಮದಿಂದ ಗೋವಾದಲ್ಲಿ ಆರಂಭಗೊಂಡಿತು. ನಂತರ ಪ್ರತಿ ವರ್ಷ ಗೋವಾದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜಿಸುತ್ತ, ಇದೀಗ ಕಳೆದ ಕೆಲ ವರ್ಷಗಳಿಂದ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆಯ ಖಾಯಂ ಸ್ಥಳವಾಗಿ ಘೋಷಣೆಯಾಗಿದೆ.
ನವೆಂಬರ್ 20 ರಂದು ಗೋವಾದಲ್ಲಿ ಚಲನಚಿತ್ರೋತ್ಸವ ಉಧ್ಘಾಟನೆಗೊಂಡಿದೆ. ಪ್ರಸಕ್ತ ವರ್ಷ ಚಲನಚಿತ್ರೋತ್ಸವದಲ್ಲಿ 15 ಜಾಗತಿಕ,40 ಏಷ್ಯಾ ಪ್ರೀಮಿಯರ್, ಹಾಗೂ 106 ಭಾರತೀಯ ಚಲನಚಿತ್ರಗಳು ಸೇರಿ ಒಟ್ಟೂ 180 ಕ್ಕೂ ಅಧಿಕ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಇದರಲ್ಲಿ 81 ದೇಶದಲ್ಲಿನ ಪುರಸ್ಕಾರ ಪಡೆದ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಚಲಚಿತ್ರೋತ್ಸವದಲ್ಲಿ ಫಿಲ್ಮ ಬಜಾರ್ ಕೂಡ ಚಲನಚಿತ್ರ ನಿರ್ಮಾಪಕರಿಗೆ ಒಂದು ಬಹುದೊಡ್ಡ ವೇದಿಕೆಯಾಗಿ ನಿಂತಿದೆ. ಸದ್ಯ ಗೋವಾದಲ್ಲಿ ಜಗತ್ತಿನ ವಿವಿಧ ದೇಶಗಳ ಚಲನಚಿತ್ರ ಕ್ಷೇತ್ರದ ದಿಗ್ಗಜರು ಹಾಗೂ ಪ್ರತಿನಿಧಿಗಳು ಗೋವಾಕ್ಕೆ ಆಗಮಿಸಿದ್ದಾರೆ. ಜಗತ್ತಿನ ವಿವಿಧ ದೇಶಗಳ ಆಯ್ದ ಚಲನಚಿತ್ರ ಪ್ರದರ್ಶನ ನಡೆಯಲಿದೆ.