ಸುದ್ದೀಕನ್ನಡ ವಾರ್ತೆ
ಪಣಜಿ: ಗೋವಾದ ಕೊಲ್ವಾಳ ಜೈಲಿನಲ್ಲಿ ಶೌಚಾಲಯದ ಬಾಗಿಲು ಅಳವಡಿಕೆ ಸೇರಿದಂತೆ ಇತರೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಕಾರಾಗೃಹದ ಹೆಚ್ಚುವರಿ ಮಹಾನಿರೀಕ್ಷಕ ಸ್ನೇಹಲ್ ಗೊಲ್ಟೆಕರ್ ಮಾಹಿತಿ ನೀಡಿದರು. ಅಲ್ಲದೆ ಲೋಕೋಪಯೋಗಿ ಇಲಾಖೆ ಮೂಲಕ ಕಟ್ಟಡಕ್ಕೆ ಬಣ್ಣ ಬಳಿಯುವುದು ಮತ್ತಿತರ ಕಾಮಗಾರಿಗಳನ್ನು ಮಾಡಲಾಗುವುದು ಎಂದರು.

ಕೊಲ್ವಾಲ್ ಕಾರಾಗೃಹದ ಕಟ್ಟಡ ದುರಸ್ತಿ ಹಾಗೂ ನೀರು ಪೂರೈಕೆಗೆ ಸಂಬಂಧಿಸಿದಂತೆ ಕಾರಾಗೃಹಗಳ ಮಹಾನಿರೀಕ್ಷಕರ ಕಚೇರಿಯು ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಿದೆ. ಟೆಂಡರ್ ತೆಗೆದುಕೊಂಡು ಕಾಮಗಾರಿ ನಡೆಸುವುದು ಸಂಬಂಧಪಟ್ಟ ಇಲಾಖೆಗಳ ಜವಾಬ್ದಾರಿಯಾಗಿದೆ ಎಂದರು.
ಇದೇ ವೇಳೆ ಕೊಲ್ವಾಲ್ ಜೈಲಿನಲ್ಲಿರುವ ಖೈದಿಗಳಿಗೆ ಮೂಲ ಸೌಕರ್ಯಗಳ ಕೊರತೆ ಬಗ್ಗೆ ಖೈದಿಗಳು ಅಳಲು ತೋಡಿಕೊಂಡರು. ನಂತರ ಮಾನವ ಹಕ್ಕುಗಳ ಆಯೋಗವು ಕಾರಾಗೃಹವನ್ನು ಪರಿಶೀಲಿಸಿತು. ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡೆಸ್ಮಂಡ್ ಡಿಕೋಸ್ತಾ, ಸದಸ್ಯ ಪ್ರಮೋದ್ ಕಾಮತ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಕೊಲ್ವಾಲ್ ಜೈಲಿನಲ್ಲಿ ಪುರುಷರ ಶೌಚಾಲಯ ಸೇರಿದಂತೆ ಮಹಿಳೆಯರ ಶೌಚಾಲಯಗಳಿಗೆ ಬಾಗಿಲು ಇಲ್ಲ. ಇದರಿಂದ ಕೈದಿಗಳ ಖಾಸಗಿತನ ಅಪಾಯದಲ್ಲಿದೆ ಎಂದು ಮಾನವ ಹಕ್ಕುಗಳ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

ಕಟ್ಟಡ ದುರಸ್ತಿ ಹಾಗೂ ಪೇಂಟಿಂಗ್‍ಗೆ ಶಿಫಾರಸು ಮಾಡಲಾಗಿದೆ. ಲೊಕೋಪಯೋಗಿ ಇಲಾಖೆಯ ಮೂಲಕ ಕಟ್ಟಡವನ್ನು ದುರಸ್ತಿ ಮಾಡಲಾಗುತ್ತಿದೆ. ಶೌಚಾಲಯದ ಬಾಗಿಲು ಒಡೆದಿದ್ದು, ಕೊಲ್ವಾಲ್ ಜೈಲು ನಿರ್ವಹಣೆಗೆ ಬಜೆಟ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೆಚ್ಚುವರಿ ಕಾರಾಗೃಹದ ಮಹಾನಿರೀಕ್ಷಕ ತಿಳಿಸಿದ್ದಾರೆ. ಅದರಂತೆ ಕೆಲಸ ಮಾಡುವುದು ಮೇಲ್ವಿಚಾರಕರ ಜವಾಬ್ದಾರಿಯಾಗಿದೆ. ಲೊಕೋಪಯೋಗಿ ಇಲಾಖೆ ದುರಸ್ತಿ ಜತೆಗೆ ಕಟ್ಟಡ ನಿರ್ವಹಣೆ ಮಾಡಬೇಕು. ಮಾನವ ಹಕ್ಕುಗಳ ಆಯೋಗದ ವರದಿಯ ಪ್ರತಿಯನ್ನು ತಕ್ಷಣವೇ ಲೊಕೋಪಯೋಗಿ ಇಲಾಖೆಗೆ ಕಳುಹಿಸುತ್ತೇವೆ ಎಂಬ ಮಾಹಿತಿ ನೀಡಿದರು.