ಸುದ್ಧಿಕನ್ನಡ ವಾರ್ತೆ
Goa: ದೇಶದಲ್ಲಿ ಇಂಟರ್ ನೆಟ್ ಬಳಕೆ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಇಂಟರ್ ನೆಟ್ ಬಳಕೆ ಮಾಡುವಲ್ಲಿ ಗೋವಾ ರಾಜ್ಯದ ಜನರು ಹಿಂದೆ ಉಳಿದಿಲ್ಲ. ಆನ್ ಲೈನ್ ಬ್ಯಾಂಕಿಂಗ್ ಬಳಕೆ, ಈಮೇಲ್ ಕಳುಹಿಸುವುದು-ಸ್ವೀಕರಿಸುವುದು, ಅಂತೆಯೇ ಇಂಟರ್ ನೆಟ್ ಮಾಧ್ಯಮದಿಂದ ಮಾಹಿತಿಯನ್ನು ಹುಡುಕುವುದು, ಇದರಲ್ಲಿ ಗೋವಾ ಪ್ರಥಮ ಸ್ಥಾನದಲ್ಲಿದೆ. ಹೌದು ಇದು ಸತ್ಯ ಸಂಗತಿ. ಕೇಂದ್ರ ಸರ್ಕಾರವು ನಡೆಸಿದ ಈ ಸರ್ವೆಯಲ್ಲಿ ಇಂಟರ್ ನೆಟ್ ಬಳಕೆಯಲ್ಲಿ ಗೋವಾ ರಾಜ್ಯ ಪ್ರಥಮ ಸ್ಥಾನದಲ್ಲಿರುವುದು ಬೆಳಕಿಗೆ ಬಂದಿದೆ.

ಕೇಂದ್ರದ ಎನ್ ಎಸ್ ಎಸ್ ಒ ಈ ಸರ್ವೆ ನಡೆಸಿದೆ. 2022-23 ರಲ್ಲಿ ಈ ಸರ್ವೆ ನಡೆಸಲಾಗಿದ್ದು ಸರ್ವೆಯಲ್ಲಿ ಗೋವಾ ಇಂಟರ್ ನೆಟ್ ಬಳಕೆಯಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿರುವುದು ಸ್ಪಷ್ಟವಾಗಿದೆ.

ಈ ಸರ್ವೆಯ ಅನುಸಾರ ಗೋವಾ ರಾಜ್ಯದಲ್ಲಿನ ಒಟ್ಟೂ ಜನಸಂಖ್ಯೆಯ ಶೇ 90.6 ರಷ್ಟು ಜನರಿಗೆ ಇಂಟರ್ ನೆಟ್ ಮಾಧ್ಯಮದ ಮೂಲಕ ಅಗತ್ಯ ಮಾಹಿತಿ ಪಡೆದುಕೊಳ್ಳುವ ಅರಿವಿದೆ ಎಂಬುದು ಬೆಳಕಿಗೆ ಬಂದಿದೆ. ಶೇ 71 ರಷ್ಟು ಗೋವಾ ರಾಜ್ಯದ ಜನರಿಗೆ ಈ ಮೇಲ್ ಹೇಗೆ ಕಳುಹಿಸುವುದು ಮತ್ತು ಸ್ವೀಕರಿಸುವುದು ಎಂಬ ಬಗ್ಗೆ ಮಾಹಿತಿ ಇದೆ. ಅಂತೆಯೇ ಶೇ 58.9 ರಷ್ಟು ಜನ ಗೋವಾ ರಾಜ್ಯದ ಜನರಿಗೆ ಆನ್ ಲೈನ್ ಬ್ಯಾಂಕಿಂಗ್ ಮೂಲಕ ವ್ಯವಹರಿಸುವ ಅರಿವಿದೆ. ಹೀಗೆ ಇಂಟರ್ ನೆಟ್ ಮೂಲಕ ಗೋವಾ ರಾಜ್ಯದ ಹೆಚ್ಚಿನ ಜನರು ವ್ಯವಹರಿಸುತ್ತಿದ್ದಾರೆ ಎಂಬ ಅಂಶ ಕೂಡ ಬೆಳಕಿಗೆ ಬಂದಿದೆ. ಇದರಿಂದಾಗಿ ಗೋವಾ ರಾಜ್ಯ ದೇಶದಲ್ಲಿಯೇ ಇಂಟರ್ ನೆಟ್ ಅತಿ ಹೆಚ್ಚು ಬಳಕೆಯ ಶೇಖಡಾವಾರು ಜನರನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.