ಸುದ್ಧಿಕನ್ನಡ ವಾರ್ತೆ
Goa: ಓಲ್ಡ ಗೋವಾದ ಸಂತ ಫ್ರಾನ್ಸಿಸ್ ಜೇವಿಯರ್ ಅವರ ಮೃತದೇಹದ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಹಿನ್ನೆಲೆಯಲ್ಲಿ RSS ಮಾಜಿ ಸಂಘಚಾಲಕ ಸುಭಾಷ್ ವೆಲಿಂಗಕರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತಂತೆ ಗುರುವಾರ ಬೆಳಗ್ಗೆ ಹೈಕೋರ್ಟ್ ನೀಡಿದ ಆದೇಶದಂತೆ ಸುಭಾಷ್ ವೆಲಿಂಗ್ಕರ್ ಬಿಚೋಲಿ ಪೊಲೀಸ್ ಠಾಣೆಗೆ ಹಾಜರಾಗಿದ್ದರು.
ಈ ವೇಳೆ ಬಿಚೋಲಿ ಪೊಲೀಸರು ವೇಲಿಂಗಕರ್ ರವರ ಹೇಳಿಕೆ ಪಡೆದು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಉಪಸ್ಥಿತರಿದ್ದರು. ನಾನು ಯಾರ ಭಾವನೆಗೂ ಧಕ್ಕೆ ತಂದಿಲ್ಲ ಎಂದು ವೇಲಿಂಗಕರ್ ಹೇಳಿದರು ಎಂದು ಮೂಲಗಳು ಮಾಹಿತಿ ನೀಡಿವೆ. ವೇಲಿಂಗಕರ್ ಪೋಲಿಸ್ ಠಾಣೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಠಾಣೆಯ ಪ್ರದೇಶದಲ್ಲಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು ಮತ್ತು ಹೆಚ್ಚಿನ ಸಂಖ್ಯೆಯ ಹಿಂದುತ್ವ ಸಂಘಟನೆಯ ಸದಸ್ಯರು ಸಹ ಹಾಜರಿದ್ದರು.
ಗೋವಾದ RSS ಮಾಜಿ ಸಂಘಚಾಲಕ ಸುಭಾಷ ವೇಲಿಂಗಕರ್ ರವರು ಗೋವಾದ ಸಂತ ಫ್ರಾನ್ಸಿಸ್ ಜೇವಿಯರ್ ರವರ ಡಿಎನ್ ಎ ತಪಾಸಣೆ ನಡೆಸಬೇಕು ಎಂದು ನೀಡಿರುವ ಹೇಳಿಕೆ ಕಳೆದ ಕೆಲ ದಿನಗಳಿಂದ ವಾದ ವಿವಾದಕ್ಕೆ ಕಾರಣವಾಗಿದೆ. ಗೋವಾ ರಾಜ್ಯದ ವಿವಿಧ ಪೋಲಿಸ್ ಠಾಣೆಗಳಲ್ಲಿ ವೇಲಿಂಗಕರ್ ವಿರುದ್ಧ ಕ್ರೈಸ್ತ ಸಮದಾಯ ಪ್ರಕರಣ ದಾಖಲಿಸಿದ್ದವು.
ರಾಜ್ಯಾದ್ಯಂತ ಕ್ಸೇವಿಯರ್ ಅವರ ಸರ್ವಧರ್ಮೀಯ ಭಕ್ತರು ಆಕ್ರೋಶದಿಂದ ಬೀದಿಗಿಳಿದರು.ವೇಲಿಂಗಕರ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಗೋವಾದ ಮಡಗಾಂವನಲ್ಲಿ ಕ್ರೈಸ್ತರು ತೀವ್ರ ಪ್ರತಿಭಟನೆಯನ್ನೂ ನಡೆಸಿದರು. ಬಿಚೋಲಿ ಪೊಲೀಸರು ವೇಲಿಂಗಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಕರೆದಿದ್ದರು. ಇದಕ್ಕಾಗಿ ಎರಡು ಬಾರಿ ಅವರಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಆದರೆ, ವೇಲಿಂಗಕರ್ ವಿಚಾರಣೆಗೆ ಹಾಜರಾಗದ ಕಾರಣ ಪೊಲೀಸರು ತಂಡಗಳನ್ನು ರಚಿಸಿ ಗೋವಾದಲ್ಲಿ ಹುಡುಕಾಟ ಆರಂಭಿಸಿದ್ದರು. ಬಿಚೋಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಮೂರನೇ ಬಾರಿ ನೋಟಿಸ್ ಕಳುಹಿಸಿದ್ದಾರೆ. ಗುರುವಾರ ಪೊಲೀಸ್ ಠಾಣೆಗೆ ಹಾಜರಾಗುವಂತೆ ನೋಟಿಸ್ ಮೂಲಕ ಆದೇಶಿಸಿದ್ದರು.