ಸುದ್ಧಿಕನ್ನಡ ವಾರ್ತೆ
Goa: ಗೋವಾದ ವಾಸ್ಕೊದಲ್ಲಿ ಮಂಗಳವಾರ ಅಕ್ಟೋಬರ್ 8ರಂದು ಸಂಜೆ ಸಿಡಿಲು ಬಡಿದು ಮಂಗೋರೆಹಿಲ್‍ನಲ್ಲಿರುವ ಅಮನ್ ವಿವೇಂದ ಕಟ್ಟಡದ ಮೇಲ್ಛಾವಣಿ ಭಾಗಶಃ ಹಾನಿಯಾಗಿದೆ. ಅಲ್ಲದೆ, ಲಿಫ್ಟ್, ಜನರೇಟರ್ ಸೇರಿದಂತೆ ಕೆಲ ನಿವಾಸಿಗಳ ವಿದ್ಯುತ್ ಉಪಕರಣಗಳು ಹಾಳಾದ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಬುಧವಾರ ಅಕ್ಟೋಬರ್ 9ರಂದು ವಾಸ್ಕೊ ಕ್ಷೇತ್ರದ ಶಾಸಕ ದಾಜಿ ಸಾಲ್ಕರ್ ಭೇಟಿ ನೀಡಿ ಪರಿಶೀಲಿಸಿದರು. ತುರ್ತು ನಿರ್ವಹಣೆಯಡಿ ಕಟ್ಟಡದ ನಿವಾಸಿಗಳಿಗೆ ಅಗತ್ಯ ಸಹಾಯ ಮಾಡಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು.

 

ಸೋಮವಾರ ಮತ್ತು ಮಂಗಳವಾರ ಗೋವಾ ರಾಜ್ಯಾದ್ಯಂತ ಭಾರಿ ಗುಡುಗು ಸಹಿತ ಮಳೆಯಾಗಿದೆ. ಅಂತೆಯೇ ವಾಸ್ಕೊ ಮಂಗೂರಹಿಲ್ ನಲ್ಲಿಯೂ ಮಂಗಳವಾರ ಸಂಜೆ ಇಲ್ಲಿ ಜೋರಾದ ಗಾಳಿ, ಮಿಂಚು, ಗುಡುಗು ಸಹಿತ ಮಳೆ ಆರಂಭವಾಗಿದೆ. ಮಂಗೋರಹಿಲ್‍ನಲ್ಲಿರುವ ಮಂಗೋರ್ ಸ್ಪೋಟ್ರ್ಸ್ ಕ್ಲಬ್‍ನ ಮುಂಭಾಗದಲ್ಲಿ, ಅಲ್ಲಿಯ ಬಹುಮಹಡಿ ಕಟ್ಟಡದ ಅಮನ್ ವಿವೇಂದದ ಟೆರೇಸ್‍ನ ಒಂದು ಬದಿಯಲ್ಲಿ ಸಿಡಿಲು ಬಡಿದಿದೆ. ಇದರಿಂದ ಸಿಮೆಂಟ್ ಕಾಂಕ್ರೀಟ್ ವಾಲ್ ಕೂಡ ಒಡೆದು ಬಿರುಕು ಬಿಟ್ಟಿದೆ. ಅಲ್ಲಿಯೇ ಪಕ್ಕದಲ್ಲಿದ್ದ ಮರಕ್ಕೆ ಸಿಡಿಲು ಬಡಿದಿದ್ದು, ಕಾರಿನ ಮೇಲೆ ಈ ಮರ ಬಿದ್ದು ಕಾರಿಗೆ ಹಾನಿಯಾಗಿದೆ.

ಕಟ್ಟಡದ ಮೇಲ್ಛಾವಣಿಗೆ ಸಿಡಿಲು ಬಡಿದ ಬಳಿಕ ಭಾರಿ ಸದ್ದು ಕೇಳಿ ಬಂದಿದ್ದು, ನೆಲಮಹಡಿಯಲ್ಲಿದ್ದ ನಿವಾಸಿಗಳು ಹಾಗೂ ಅಂಗಡಿಕಾರರಲ್ಲಿ ಆತಂಕ ಮೂಡಿಸಿದೆ. ಬುಧವಾರ ಬೆಳಗ್ಗೆ ಶಾಸಕ ದಾಜಿ ಸಾಲ್ಕರ್ ಅವರು ಪುರಸಭೆ ಅಧ್ಯಕ್ಷ ಗಿರೀಶ್ ಬೋರ್ಕರ್, ತಹಶೀಲ್ದಾರ ಪ್ರವಿಂಜಯ ಪಂಡಿತ್, ತಲಾಟಿ ಗೌತಮ್ ಸಾಳುಂಖೆ ಮತ್ತಿತರರೊಂದಿಗೆ ಅಲ್ಲಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ವೇಳೆ ಹಾನಿಯ ವರದಿ ಸಿದ್ಧಪಡಿಸಿ ಜಿಲ್ಲಾಧಿಕಾರಿ ಕಚೇರಿಗೆ ನೀಡಲಾಗುವುದು ಎಂದು ಅವರು ತಿಳಿಸಿದರು.