ಸುದ್ಧಿಕನ್ನಡ ವಾರ್ತೆ
Goa Rain: ಗೋವಾ ರಾಜ್ಯದಲ್ಲಿ ಪ್ರಸಕ್ತ ವರ್ಷ ಅತಿ ಹೆಚ್ಚು ಮಳೆ ದಾಖಲಾಗಿದೆ.ಕಳೆದ ಕೆಲ ದಿನಗಳ ವಿಶ್ರಾಂತಿಯ ನಂತರ ಇದೀಗ ಸೋಮವಾರದಿಂದ ಗೋವಾ ರಾಜ್ಯಾದ್ಯಂತ ಮತ್ತೆ ಗುಡುಗು ಸಹಿತ ಮಳೆ ಆರಂಭಗೊಂಡಿದೆ. ಸೋಮವಾರ ಮತ್ತು ಮಂಗಳವಾರ ರಾತ್ರಿ ರಾಜ್ಯದಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ.
ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 173.25 ಇಂಚುಗಳಷ್ಟು ದಾಖಲೆಯ ಮಳೆಯಾಗಿದೆ. ಇದು ಗೋವಾ ಸ್ವತಂತ್ರವಾದ ನಂತರ ಇದು ಅತಿ ಹೆಚ್ಚು ಮಾನ್ಸೂನ್ ಮಳೆ ಎಂದೇ ಹೇಳಲಾಗಿದೆ.. ಈ ವರ್ಷ ಜೂನ್ ಮತ್ತು ಜುಲೈ ಎರಡು ತಿಂಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಇಡೀ ರಾಜ್ಯದ ಜನಜೀವನ ಅಸ್ತವ್ಯಸ್ಥಗೊಳಿಸಿದೆ. ಪ್ರಸಕ್ತ ವರ್ಷ ಗೋವಾದ ವಾಳಪೈ ಮತ್ತು ಸಾಖಳಿ ಎಂಬ ಎರಡು ಕೇಂದ್ರಗಳಲ್ಲಿ ಮಳೆಯು ದಾಖಲೆ ಅಂದರೆ 200 ಇಂಚಿನಷ್ಟು ಮಳೆಯಾಗಿದೆ. ಈ ವರ್ಷದ ಮಳೆಯಿಂದಾಗಿ ನಾಗರಿಕರು ಹಾಗೂ ಸರಕಾರಕ್ಕೂ ಕೋಟ್ಯಂತರ ರೂ. ಹಾನಿಯಾಗಿದೆ.
ಕಳೆದೆರಡು ದಿನಗಳಿಂದ ಉಷ್ಣಾಂಶದಲ್ಲಿ ವಿಪರೀತ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು “ಯೆಲ್ಲೋ ಅಲರ್ಟ್” ಘೋಷಿಸಿ ಮಳೆಯ ಮುನ್ಸೂಚನೆ ನೀಡಿತ್ತು. ಇದರ ಪ್ರಕಾರ ಸೋಮವಾರ ಮತ್ತು ಮಂಗಳವಾರ ಸಂಜೆ ರಾಜ್ಯದ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ಕಾಣಿಸಿಕೊಂಡಿದೆ. ಇದರಿಂದಾಗಿ ಕೆಲವೆಡೆ ಜನಜೀವನ ಸ್ವಲ್ಪ ಮಟ್ಟಿಗೆ ಅಸ್ತವ್ಯಸ್ತಗೊಂಡಿದೆ.
ಗೋವಾದ ಹಲವೆಡೆ ಗಾಳಿ ಮಳೆಗೆ ಬ್ರಹದಾಕಾರದ ಮರಗಳು ರಸ್ತೆಯ ಮೇಲೆ ಮತ್ತು ವಿದ್ಯುತ್ ಕಂಬಗಳ ಮೇಲೆ ಬಿದ್ದು ಹೆಚ್ಚಿನ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಮಂಗಳವಾರ ರಾತ್ರಿ ಕೂಡ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ.