ಪಣಜಿ: ಐಐಟಿ ಅಲುಮ್ನಿ ಕೌನ್ಸಿಲ್‍ನಿಂದ ಸಿಎಸ್‍ಆರ್ (ಕಾರ್ಪೊರೇಟ್-ಸಾಮಾಜಿಕ ಜವಾಬ್ದಾರಿ) ನಿಧಿಯ ಮೂಲಕ ಸುಮಾರು 700 ಕೋಟಿ ರೂಪಾಯಿ ವೆಚ್ಚದಲ್ಲಿ 500 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‍ಗಳನ್ನು ಗೋವಾ ಪಡೆಯಲಿದೆ. ಈ ಬಸ್‍ಗಳು ಶೀಘ್ರದಲ್ಲೇ ರಾಜ್ಯ ಪ್ರವೇಶಿಸಲಿವೆ. ಇದು ಗೋವಾದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಸಾರಿಗೆ ಸಚಿವ ಮಾವಿನ್ ಗುದಿನ್ಹೋ ಹೇಳಿದ್ದಾರೆ.

ಮುಖ್ಯ ಕಾರ್ಯದರ್ಶಿ ಪುನಿತ್ ಕುಮಾರ್ ಗೋಯಲ್ ಅವರು ಐಐಟಿ ಅಲುಮ್ನಿ ಕೌನ್ಸಿಲ್‍ಗೆ ‘ಸಿಎಸ್‍ಆರ್’ ನಿಧಿಯಿಂದ ಗೋವಾ ಎಲೆಕ್ಟ್ರಿಕ್ ಬಸ್‍ಗಳನ್ನು ಪಡೆಯಬೇಕು ಎಂದು ಮನವಿ ಮಾಡಿದ್ದರು. ಮುಖ್ಯ ಕಾರ್ಯದರ್ಶಿಯವರ ಈ ಬೇಡಿಕೆಗೆ ಐಐಟಿ ಅಲುಮ್ನಿ ಕೌನ್ಸಿಲ್‍ನಿಂದ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಸಿಎಸ್‍ಆರ್ ನಿಧಿಯಿಂದ 700 ಕೋಟಿ ರೂಪಾಯಿ ವೆಚ್ಚದಲ್ಲಿ 500ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‍ಗಳನ್ನು ಗೋವಾಕ್ಕೆ ಒದಗಿಸಲು ಐಐಟಿ ಮಂಡಳಿ ಒಪ್ಪಿಗೆ ನೀಡಿದೆ. ಈ ಬಸ್‍ಗಳು ಶೀಘ್ರದಲ್ಲೇ ಗೋವಾ ಪ್ರವೇಶಿಸಲಿವೆ ಎಂಬ ನಂಬಿಕೆಯನ್ನು ಸಚಿವ ಗುದಿನ್ಹೊ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಅದರ ಪ್ರಯೋಜನಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ರಾಜ್ಯ ಸರ್ಕಾರವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಕದಂಬ ನಿಗಮದ ಮೂಲಕ ಎಲೆಕ್ಟ್ರಿಕ್ ಬಸ್ ಖರೀದಿಸಲು ಒತ್ತು ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಐಐಟಿ ಪರಿಷತ್ ನಿಂದ ಇನ್ನೂ 500 ಎಲೆಕ್ಟ್ರಿಕ್ ಬಸ್ ಗಳು ರಾಜ್ಯಕ್ಕೆ ಬಂದರೆ ಗೋಮಾಂತಕದ ಜನತೆಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವ ಮಾವಿನ್ ಗುದಿನ್ಹೊ ಮಾಹಿತಿ ನೀಡಿದರು.